ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ
ಪಿಟಿಐ ಚಿತ್ರ
ಲಂಡನ್: ಲಾರ್ಡ್ಸ್ ಅಂಗಳದಲ್ಲಿ ಶನಿವಾರ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಸಂಭ್ರಮ ಮುಗಿಲುಮುಟ್ಟಿತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ ತಂಡವು ವಿಜೃಂಭಿಸಿತು.
ದಕ್ಷಿಣ ಆಫ್ರಿಕಾ ತಂಡವು 27 ವರ್ಷಗಳ ನಂತರ ಗೆದ್ದ ಐಸಿಸಿ ಪ್ರಶಸ್ತಿ ಇದಾಗಿದೆ. ಫೈನಲ್‌ನಲ್ಲಿ ಏಡನ್ ಮರ್ಕರಂ (136; 207ಎಸೆತ) ಅವರ ವಿಶ್ವಾಸಭರಿತ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಗೆದ್ದಿತು.
ಪಂದ್ಯದ ಮೂರನೇ ದಿನವಾದ ಶುಕ್ರವಾರ 282 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟಿತ್ತು. ‘ಚಾಂಪಿಯನ್’ ಬೌಲರ್‌ಗಳಿರುವ ಆಸ್ಟ್ರೇಲಿಯಾದ ದಾಳಿಯನ್ನು ಹಿಮ್ಮೆಟ್ಟಿಸುವುದು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಿಗೆ ಸಾಧ್ಯವೇ ಎಂಬ ಅನುಮಾನವೂ ಮೂಡಿತ್ತು. ಮಿಚೆಲ್ ಸ್ಟಾರ್ಕ್ ದಾಳಿಗೆ ದಕ್ಷಿಣ ಆಫ್ರಿಕಾ 70 ರನ್‌ಗಳಿಗೆ 2 ವಿಕೆಟ್ ಕೂಡ ಕಳೆದುಕೊಂಡಿತ್ತು.
ಈ ಹಂತದಲ್ಲಿ ಮರ್ಕರಂ ಮತ್ತು ನಾಯಕ ತೆಂಬಾ ಬವುಮಾ (66; 134ಎ) ಅವರ ಜೊತೆಯಾಟವು ತಂಡಕ್ಕೆ ಗೆಲುವಿನ ಹಾದಿ ತೋರಿಸಿತು. ಮೂರನೇ ದಿನದಾಟದ ಅಂತ್ಯಕ್ಕೆ ತಂಡವು 213 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿ ತಲುಪಿತು. 102 ರನ್ ಗಳಿಸಿದ್ದ ಮರ್ಕರಂ ಮತ್ತು ತೆಂಬಾ ಕ್ರೀಸ್‌ನಲ್ಲಿದ್ದರು.
ನಾಲ್ಕನೇ ದಿನದಾಟದಲ್ಲಿ ಜಯಕ್ಕೆ ಅವಶ್ಯವಿದ್ದ 69 ರನ್ ಗಳಿಸುವುದು ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ಸುಲಭವಾಗಿರಲಿಲ್ಲ. ಹೋದ ವರ್ಷದ ಚಾಂಪಿಯನ್ ಆಸ್ಟ್ರೇಲಿಯಾದ ಬೌಲರ್‌ಗಳು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಪಣಕ್ಕೊಡ್ಡಿದರು.
ಪ್ಯಾಟ್ ಕಮಿನ್ಸ್ ಮತ್ತು ಸ್ಟಾರ್ಕ್ ಅವರು ಕ್ರಮವಾಗಿ ತೆಂಬಾ ಮತ್ತು ಟ್ರಿಸ್ಟನ್ ಸ್ಟಬ್ಸ್ (8 ರನ್) ಅವರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಎಲ್ಲ ಬೌಲರ್‌ಗಳೂ ನಿಖರ ದಾಳಿ ಸಂಘಟಿಸುವ ಮೂಲಕ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಿಸಿದರು. ಈ ನಡುವೆ ಮರ್ಕರಂ ಮಾತ್ರ ಅಚಲವಾಗಿ ನಿಂತಿದ್ದರು. ಗೆಲುವಿಗೆ ಇನ್ನೂ 6 ರನ್‌ಗಳಷ್ಟೇ ಅವಶ್ಯವಿದ್ದ ಸಂದರ್ಭದಲ್ಲಿ ಮರ್ಕರಂ ವಿಕೆಟ್ ಉರುಳಿಸುವಲ್ಲಿ ಜೋಶ್ ಹೇಜಲ್‌ವುಡ್ ಯಶಸ್ವಿಯಾದರು. ಟ್ರಾವಿಸ್ ಹೆಡ್ ಪಡೆದ ಕ್ಯಾಚಿಗೆ ಮರ್ಕರಂ ಇನಿಂಗ್ಸ್‌ಗೆ ತೆರೆ ಬಿತ್ತು. ಒಟ್ಟು 6 ಗಂಟೆ, 23 ನಿಮಿಷಗಳವರೆಗೆ ಅವರು ಕ್ರೀಸ್‌ನಲ್ಲಿದ್ದರು.
ಇನ್ನೊಂದು ಬದಿಯಲ್ಲಿದ್ದ ಡೇವಿಡ್ ಬೆಡಿಂಗ್‌ಹ್ಯಾಮ್ (ಔಟಾಗದೇ 21) ಮತ್ತು ಕೈಲ್ ವೆರೆಯೇನ್ (ಔಟಾಗದೇ 4) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಕೈಲ್ ಅವರು ಕವರ್ಸ್‌ಗೆ ಚೆಂಡನ್ನು ಡ್ರೈವ್ ಮಾಡುವ ಮೂಲಕ ಗೆಲುವಿನ ರನ್ ಗಳಿಸಿದರು.
ಲಾರ್ಡ್ಸ್ ಅಂಗಳದಲ್ಲಿ ಚೇಸಿಂಗ್ ಮಾಡಿ ಗೆದ್ದ ಎರಡನೇ ದೊಡ್ಡ ಮೊತ್ತ ಇದಾಗಿದೆ. 141 ವರ್ಷಗಳ ನಂತರ ಈ ಸಾಧನೆ ಮೂಡಿಬಂದಿದೆ.
ಮೂರನೇ ಚಾಂಪಿಯನ್: 2019ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾಯಿತು. ಇದುವರೆಗೂ ಒಟ್ಟು ಮೂರು ಆವೃತ್ತಿಗಳು ಮುಗಿದಿವೆ. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಮತ್ತು ಎರಡನೇಯದ್ದರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದ್ದವು. ಎರಡೂ ಸಲವೂ ಭಾರತ ರನ್ನರ್ಸ್ ಅಪ್ ಆಗಿತ್ತು. ಈ ಸಲ ದಕ್ಷಿಣ ಆಫ್ರಿಕಾ ‘ಐಸಿಸಿ ರಾಜದಂಡ’ವನ್ನು ತನ್ನದಾಗಿಸಿಕೊಂಡಿತು.
ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡನ್ ಮರ್ಕರಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.