ADVERTISEMENT

ಎಡವಿದ ಸನ್‌ರೈಸರ್ಸ್‌; ಗೆದ್ದ ಕ್ಯಾಪಿಟಲ್ಸ್‌

ವಾರ್ನರ್‌–ಬೇಸ್ಟೊ 72 ರನ್‌ಗಳ ಜೊತೆಯಾಟ ವ್ಯರ್ಥ; ರಬಾಡ, ಕೀಮೊ ಪೌಲ್‌ ಪ್ರಬಲ ದಾಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 1:38 IST
Last Updated 15 ಏಪ್ರಿಲ್ 2019, 1:38 IST
ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬೌಲರ್ ಖಲೀಲ್ ಅಹಮದ್ ಸಂಭ್ರಮ –ಎಎಫ್‌ಪಿ ಚಿತ್ರ
ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬೌಲರ್ ಖಲೀಲ್ ಅಹಮದ್ ಸಂಭ್ರಮ –ಎಎಫ್‌ಪಿ ಚಿತ್ರ   

ಹೈದರಾಬಾದ್: ಅಮೋಘ ಆರಂಭದ ನಂತರ ವಿಕೆಟ್‌ಗಳು ನಿರಂತರವಾಗಿ ಉರುಳಿದವು. ಸುಲಭ ಜಯ ಗಳಿಸುವ ಅವಕಾಶವನ್ನು ಆತಿಥೇಯರು ಕೈಚೆಲ್ಲಿದರು. ಇಲ್ಲಿನ ರಾಜೀವಗಾಂಧಿಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್‌ರೈಸರ್ಸ್‌ ಹೈದರಾಬಾದ್ ಎದುರು 39 ರನ್‌ಗಳಿಂದ ಗೆದ್ದಿತು.

156 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಸನ್‌ರೈಸರ್ಸ್‌ಗೆ ಡೇವಿಡ್‌ ವಾರ್ನರ್ (51; 47 ಎಸೆತ, 1 ಸಿಕ್ಸರ್‌, 3 ಬೌಂಡರಿ) ಮತ್ತು ಜಾನಿ ಬೇಸ್ಟೊ (41; 31 ಎ, 1 ಸಿ, 5 ಬೌಂ) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 72 ರನ್‌ ಸೇರಿಸಿದರು. ಹೀಗಾಗಿ ತಂಡ ಸುಲಭವಾಗಿ ಜಯ ಗಳಿಸುವ ಭರವಸೆ ಮೂಡಿತು. 10ನೇ ಓವರ್‌ನಲ್ಲಿ ಈ ಜೊತೆಯಾಟ ಮುರಿದು ಬಿದ್ದ ನಂತರ ತಂಡ ದಿಢೀರ್ ಪತನ ಕಂಡಿತು. ಕಗಿಸೊ ರಬಾಡ, ಕೀಮೊ ಪೌಲ್‌ ಮತ್ತು ಕ್ರಿಸ್ ಮಾರಿಸ್‌ ವಿಕೆಟ್‌ಗಳನ್ನು ಉರುಳಿಸಿ ಸಂಭ್ರಮಿಸಿದರು. ಕೊನೆಯ ಒಂಬತ್ತು ಮಂದಿ ಎರಡಂಕಿ ಮೊತ್ತ ದಾಟಲಾಗದೆ ವಾಪಸಾದರು. 44 ರನ್‌ಗಳಿಗೆ ತಂಡ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು.

ಭುವಿ–ಖಲೀಲ್‌ ಪರಿಣಾಮಕಾರಿ ದಾಳಿ: ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಧ್ಯಮ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಖಲೀಲ್ ಅಹಮ್ಮದ್‌ ಪೆಟ್ಟು ನೀಡಿದರು. ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಆವರನ್ನು ತಂಡ ಎರಡನೇ ಓವರ್‌ನಲ್ಲಿಯೇ ಕಳೆದುಕೊಂಡಿತು. ನಾಲ್ಕನೇ ಓವರ್‌ನಲ್ಲಿ ಶಿಖರ್ ಧವನ್ ಕೂಡ ವಾಪಸಾದರು.

ADVERTISEMENT

ಆದರೆ, ಕಾಲಿನ್ ಮನ್ರೊ ನಾಯಕ ಶ್ರೇಯಸ್ ಅಯ್ಯರ್ ತಿರುಗೇಟು ನೀಡಿ 49 ರನ್‌ಗಳ ಜೊತೆಯಾಟ ಆಡಿದರು. ನಂತರ ಸನ್‌ರೈಸರ್ಸ್‌ ಬೌಲರ್‌ಗಳು ಹಿಡಿತ ಸಾಧಿಸಿದರು. ಈ ಸಂದರ್ಭದಲ್ಲಿ ಜೊತೆಗೂಡಿದ ಶ್ರೇಯಸ್ ಮತ್ತು ರಿಷಭ್ ಪಂತ್ 56 ರನ್‌ ಸೇರಿಸಿದರು. ಇದರಿಂದಾಗಿ ತಂಡ ನೂರರ ಗಡಿ ದಾಟಿತು. ಇವರಿಬ್ಬರು ಔಟಾದ ನಂತರ ತಂಡ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು.

ಸಂಕ್ಷಿಪ್ತ ಸ್ಕೋರು

ಡೆಲ್ಲಿ ಕ್ಯಾಪಿಟಲ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 155 (ಕಾಲಿನ್ ಮನ್ರೊ 40, ಶ್ರೇಯಸ್ ಅಯ್ಯರ್ 45, ರಿಷಭ್ ಪಂತ್ 23, ಅಕ್ಷರ್ ಪಟೇಲ್ 14; ಭುವನೇಶ್ವರ್ ಕುಮಾರ್ 33ಕ್ಕೆ2, ಖಲೀಲ್ ಅಹಮದ್ 30ಕ್ಕೆ3, ಅಭಿಷೇಕ್ ಶರ್ಮಾ 10ಕ್ಕೆ1, ರಶೀದ್ ಖಾನ್ 22ಕ್ಕೆ1);

ಸನ್‌ರೈಸರ್ಸ್ ಹೈದರಾಬಾದ್‌: 18.5 ಓವರ್‌ಗಳಲ್ಲಿ 116ಕ್ಕೆ ಆಲೌಟ್‌ (ಡೇವಿಡ್ ವಾರ್ನರ್‌ 51, ಜಾನಿ ಬೇಸ್ಟೊ 41; ಕಗಿಸೊ ರಬಾಡ 22ಕ್ಕೆ4, ಕ್ರಿಸ್ ಮಾರಿಸ್‌ 22ಕ್ಕೆ3, ಕೀಮೊ ಪೌಲ್‌ 17ಕ್ಕೆ3).

ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 39 ರನ್‌ಗಳ ಜಯ.

ಪಂದ್ಯಶ್ರೇಷ್ಠ: ಕೀಮೊ ಪೌಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.