ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಇಸುರು ಉಡಾನ ವಿದಾಯ

ಪಿಟಿಐ
Published 31 ಜುಲೈ 2021, 12:18 IST
Last Updated 31 ಜುಲೈ 2021, 12:18 IST
ಇಸುರು ಉಡಾನ– ಎಎಫ್‌ಪಿ ಚಿತ್ರ
ಇಸುರು ಉಡಾನ– ಎಎಫ್‌ಪಿ ಚಿತ್ರ   

ಕೊಲಂಬೊ: ಶ್ರೀಲಂಕಾದ ಬೌಲಿಂಗ್ ಆಲ್‌ರೌಂಡರ್‌ ಇಸುರು ಉಡಾನ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ದಶಕದ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

12 ವರ್ಷಗಳ ಕಾಲ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದ ಉಡಾನ, 21 ಏಕದಿನ, 35 ಟಿ–20 ಪಂದ್ಯಗಳನ್ನು ಆಡಿದ್ದಾರೆ. ಎಡಗೈ ಮಧ್ಯಮವೇಗಿ ಆಗಿರುವ ಅವರು ಒಟ್ಟು 45 ವಿಕೆಟ್‌ ಗಳಿಸಿದ್ದಾರೆ.

33 ವರ್ಷದ ಉಡಾನ, ಭಾರತ ತಂಡದ ವಿರುದ್ಧ ಗುರುವಾರ ಕೊನೆಗೊಂಡ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಿದ್ದರು. ದೇಶಿ ಮತ್ತು ಫ್ರಾಂಚೈಸ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ. ಈ ಹಿಂದೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಎರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದರು.

ADVERTISEMENT

ಬಲಗೈ ಬ್ಯಾಟ್ಸ್‌ಮನ್ ಕೂಡ ಆಗಿರುವ ಉಡಾನ, 2009ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಪ‍ಂದ್ಯದ ಮೂಲಕ ಟಿ–20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಚುಟುಕು ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಶ್ರೀಲಂಕಾ ಸೋಲನುಭವಿಸಿತ್ತು. 2012ರಲ್ಲಿ ಭಾರತ ತಂಡದ ವಿರುದ್ಧ ಆಡಿದ್ದು ಅವರ ಮೊದಲ ಏಕದಿನ ಪಂದ್ಯವಾಗಿದೆ.

‘ಕ್ರಿಕೆಟ್‌ ಎಂದರೆ ನನಗೆ ಯಾವಾಗಲೂ ಒಲವು. ನನಗೆ ಸಾಧ್ಯವಾದಷ್ಟು ಉತ್ತಮ ಆಟವಾಡಿದ್ದೇನೆ. ಕ್ರೀಡಾಸ್ಫೂರ್ತಿಯಿಂದ ನಡೆದುಕೊಂಡಿದ್ದೇನೆ‘ ಎಂದು ಉಡಾನ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.