ADVERTISEMENT

ಕುಶಲ್ ಮೆಂಡಿಸ್‌ ಸೇರಿ ಶ್ರೀಲಂಕಾ ತಂಡದ ಮೂವರ ಅಮಾನತು

ಕ್ರಿಕೆಟ್‌: ಬಯೋಬಬಲ್‌ ನಿಯಮ ಉಲ್ಲಂಘಿಸಿದ ಆರೋಪ

ಪಿಟಿಐ
Published 28 ಜೂನ್ 2021, 13:29 IST
Last Updated 28 ಜೂನ್ 2021, 13:29 IST
ಕುಶಲ್ ಮೆಂಡಿಸ್‌– ಎಎಫ್‌ಪಿ ಚಿತ್ರ
ಕುಶಲ್ ಮೆಂಡಿಸ್‌– ಎಎಫ್‌ಪಿ ಚಿತ್ರ   

ಕೊಲಂಬೊ: ಬಯೋಬಬಲ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರಾದ ಕುಶಲ್ ಮೆಂಡಿಸ್‌, ನಿರೋಶನ್ ಡಿಕ್ವೆಲ್ಲಾ ಮತ್ತು ಧನುಷ್ಕಾ ಗುಣತಿಲಕ ಅವರನ್ನು ಅಮಾನತು ಮಾಡಲಾಗಿದೆ. ಸದ್ಯ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಈ ಮೂವರಿಗೆ ಸ್ವದೇಶಕ್ಕೆ ಮರಳುವಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ (ಎಸ್‌ಎಲ್‌ಸಿ) ಸೂಚಿಸಿದೆ.

ಆತಿಥೇಯ ಇಂಗ್ಲೆಂಡ್ ಎದುರು ಭಾನುವಾರ ರಾತ್ರಿ ನಡೆದ ಅಂತಿಮ ಟಿ–20 ಪಂದ್ಯದ ನಂತರ ಬ್ಯಾಟ್ಸ್‌ಮನ್‌ ಕುಶಲ್ ಹಾಗೂ ವಿಕೆಟ್‌ ಕೀಪರ್ ನಿರೋಶನ್ ಅವರು ಆರಂಭಿಕ ಬ್ಯಾಟ್ಸ್‌ಮನ್‌ ಗುಣತಿಲಕ ಅವರೊಂದಿಗೆ ಡರ್ಹಮ್‌ನ ಬೀದಿಗಳಲ್ಲಿ ಓಡಾಡುತ್ತಿದ್ದದ್ದು ವಿಡಿಯೊಂದರಲ್ಲಿ ದಾಖಲಾಗಿದೆ. ಶ್ರೀಲಂಕಾ ತಂಡವು ಈ ಪಂದ್ಯದಲ್ಲಿ 89 ರನ್‌ಗಳಿಂದ ಸೋತಿತ್ತು.

ಈ ಮೂವರು ಆಟಗಾರರು ತಂಡದ ಆಡುವ ಹನ್ನೊಂದರ ಬಳಗದಲ್ಲಿದ್ದರು.

ADVERTISEMENT

‘ಬಯೋಬಬಲ್ ನಿಯಮ ಉಲ್ಲಂಘಿಸಿದ ಕುಶಲ್ ಮೆಂಡಿಸ್‌, ಧನುಷ್ಕಾ ಗುಣತಿಲಕ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯು ಅಮಾನತು ಮಾಡಿದೆ ಮತ್ತು ಶೀಘ್ರವೇ ಅವರನ್ನು ಶ್ರೀಲಂಕಾಕ್ಕೆ ಕರೆಸಿಕೊಳ್ಳಲಾಗಿದೆ‘ ಎಂದು ಎಸ್‌ಎಲ್‌ಸಿ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ಹೇಳಿದ್ದಾರೆ.

ಈ ಬಗ್ಗೆ ಲಂಕಾ ತಂಡದ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿರುವ ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಡಿಸಿಲ್ವಾ ‘ನಿಯಮ ಉಲ್ಲಂಘಿಸಿದ್ದರ ಕುರಿತು ತನಿಖೆ ನಡೆಯುತ್ತಿದೆ‘ ಎಂದಿದ್ದಾರೆ.

ಇಂಗ್ಲೆಂಡ್ ಎದುರಿನ ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯನ್ನುಶ್ರೀಲಂಕಾ 0–3ರಿಂದ ಕಳೆದುಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿಮಂಗಳವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.