ಕೊಲಂಬೊ: ಅನುಭವಿ ಆಲ್‌ರೌಂಡರ್ ನೀಲಾಕ್ಷಿಕಾ ಸಿಲ್ವ ಅವರ ಆಕ್ರಮಣಕಾರಿ ಆಟದ (33 ಎಸೆತಗಳಲ್ಲಿ 56) ನೆರವಿನಿಂದ ಶ್ರೀಲಂಕಾ ತಂಡ ಮಹಿಳಾ ತ್ರಿಕೋನ ಸರಣಿ ಏಕದಿನ ಪಂದ್ಯದಲ್ಲಿ ಭಾರತ ತಂಡದ ಮೇಲೆ ಭಾನುವಾರ ಮೂರು ವಿಕೆಟ್‌ಗಳ ಜಯ ಪಡೆಯಿತು. ಇದು ದ್ವೀಪರಾಷ್ಟ್ರವು, ಭಾರತ ತಂಡದ ವಿರುದ್ಧ ಏಳು ವರ್ಷಗಳಲ್ಲಿ ದಾಖಲಿಸಿದ ಮೊದಲ ಜಯ ಎನಿಸಿತು.
ಲಂಕಾಕ್ಕೆ ಇದು ಟೂರ್ನಿಯಲ್ಲಿ ಎರಡನೇ ಗೆಲುವು ಆಗಿದ್ದು ಅದು ಫೈನಲ್‌ನತ್ತ ಹೆಜ್ಜೆಯಿಟ್ಟಿತು. ಇದು ಸರಣಿಯಲ್ಲಿ ಭಾರತಕ್ಕೆ ಮೊದಲ ಸೋಲು. ಆದರೆ ಈ ಹಿಂದೆ ಎರಡು ಗೆಲುವುಗಳನ್ನು ಸಾಧಿಸಿದ ಕಾರಣ ಫೈನಲ್ ತಲುಪುವ ನಿರೀಕ್ಷೆಯಿದೆ.
ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಭಾರತ 9 ವಿಕೆಟ್‌ಗೆ 275 ರನ್ ಗಳಿಸಿತು. ವಿಕೆಟ್ ಕೀಪರ್ –ಬ್ಯಾಟರ್ ರಿಚಾ ಘೋಷ್ 48 ಎಸೆತಗಳಲ್ಲಿ 58 ರ್ ಬಾರಿಸಿದರು. ಒಂದು ಹಂತದಲ್ಲಿ 33ನೇ ಓವರಿನ ನಂತರ 4 ವಿಕೆಟ್‌ಗೆ 152 ರನ್ ಗಳಿಸಿ ಪರದಾಡುತ್ತಿದ್ದ ಲಂಕಾ ತಂಡ ಅಂತಿಮವಾಗಿ ಐದು ಎಸೆತಗಳಿರುವಂತೆ 7 ವಿಕೆಟ್‌ಗೆ 278 ರನ್ ಹೊಡೆಯಿತು.
ಪಂದ್ಯದ ಆಟಗಾರ್ತಿ ಗೌರವಕ್ಕೆ ಪಾತ್ರರಾದ ನೀಲಾಕ್ಷಿಕಾ ಬಿರುಸಿನ ಆಟವಾಡಿ ಮೂರು ಸಿಕ್ಸರ್, ಐದು ಬೌಂಡರಿಗಳನ್ನು ಬಾರಿಸಿದರು. ನಂತರ ಅನುಷ್ಕಾ ಸಂಜೀವನಿ (ಅಜೇಯ 23) ಮತ್ತು ಸುಗಂಧಿಕಾ ಕುಮಾರಿ (ಅಜೇಯ 19, 20ಎ) ತಂಡ ಗುರಿತಲುಪಲು ನೆರವಾದರು. ಭಾರತದ ಕಡೆ ಅನುಭವಿ ಆಫ್ ಸ್ಪಿನ್ನರ್ ಸ್ನೇಹ ರಾಣಾ ಮೂರು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಭಾರತ: 50 ಓವರುಗಳಲ್ಲಿ 9ಕ್ಕೆ 275 (ಪ್ರತಿಕಾ ರಾವಲ್ 35, ಹರ್ಲೀನ್ ಡಿಯೋಲ್ 29, ಹರ್ಮನ್‌ಪ್ರೀತ್ ಕೌರ್ 30, ಜೆಮಿಮಾ ರಾಡ್ರಿಗಸ್ 37, ರಿಚಾ ಘೋಷ್ 58, ದೀಪ್ತಿ ಶರ್ಮಾ 24; ಸುಗಂಧಿಕಾ ಕುಮಾರಿ 44ಕ್ಕೆ3, ಚಾಮರಿ ಅಟ್ಟಪಟ್ಟು 45ಕ್ಕೆ3);
ಶ್ರೀಲಂಕಾ: 49.1 ಓವರುಗಳಲ್ಲಿ 7 ಕ್ಕೆ 278 (ವಿಶ್ಮಿ ಗುಣರತ್ನೆ 33, ಹರ್ಷಿತಾ ಸಮರವಿಕ್ರಮ 53, ಕವಿಶಾ ದಿಲ್ಹಾರಿ 35, ನೀಲಾಕ್ಷಿಕಾ ಸಿಲ್ವ 56; ಸ್ನೇಹ ರಾಣಾ 45ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.