ಪ್ರವೀಣ್ ಜಯವಿಕ್ರಮ
–ಎಕ್ಸ್ ಚಿತ್ರ
ಕೊಲಂಬೊ: ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘನೆಗಾಗಿ ಶ್ರೀಲಂಕಾದ ಕ್ರಿಕೆಟಿಗ ಪ್ರವೀಣ್ ಜಯವಿಕ್ರಮ ಅವರಿಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಒಂದು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಷೇಧ ವಿಧಿಸಿದೆ.
2022ರ ಜೂನ್‌ನಿಂದ ರಾಷ್ಟ್ರೀಯ ತಂಡದಿಂದ ಹೊರಗಿರುವ 26 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್, ಐಸಿಸಿಯ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಆರು ತಿಂಗಳ ಅಮಾನತು ಸೇರಿದಂತೆ ಒಂದು ವರ್ಷ ನಿಷೇಧ ಹೇರಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
2021ರ ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿ ಮತ್ತು ಭವಿಷ್ಯದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ‘ಮ್ಯಾಚ್ ಫಿಕ್ಸಿಂಗ್’ಗೆ ಸಂಬಂಧಿಸಿದಂತೆ ವರದಿ ಮಾಡಲು ವಿಫಲವಾಗಿರುವುದು ಮತ್ತು ಮೊಬೈಲ್‌ನಲ್ಲಿದ್ದ ಸಾಕ್ಷ್ಯ ಅಳಿಸಿದ ಆರೋಪ ಅವರ ಮೇಲಿದೆ.
2021ರ ಏಪ್ರಿಲ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಜಯವಿಕ್ರಮ ಅವರು ಲಂಕಾ ಪರ ಐದು ಟೆಸ್ಟ್, ಐದು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೂರು ಸ್ವರೂಪಗಳಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದು 32 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.