ADVERTISEMENT

ಲಂಕಾ– ಜಿಂಬಾಬ್ವೆ ಸೆಣಸಾಟ: ಬಿ ಗುಂಪಿನ ಅಗ್ರಸ್ಥಾನಕ್ಕೆ ಪೈಪೋಟಿ

ಪಿಟಿಐ
Published 19 ಫೆಬ್ರುವರಿ 2026, 0:30 IST
Last Updated 19 ಫೆಬ್ರುವರಿ 2026, 0:30 IST
<div class="paragraphs"><p> ಜಿಂಬಾಂಬ್ವೆ ಆಟಗಾರರು</p></div>

ಜಿಂಬಾಂಬ್ವೆ ಆಟಗಾರರು

   

ಫೋಟೊ ಕೃಪೆ: ಜಿಂಬಾಂಬ್ವೆ ಕ್ರಿಕೆಟ್

ಕೊಲಂಬೊ: ಯಶಸ್ಸಿನ ಓಟದಲ್ಲಿರುವ ಜಿಂಬಾಬ್ವೆ ತಂಡವು, ಗುರುವಾರ ನಡೆಯುವ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಈಗಾಗಲೇ ಸೂಪರ್ ಎಂಟರಲ್ಲಿ ಸ್ಥಾನ ಖಾತರಿಪಡಿಸಿದ್ದು, ಗೆದ್ದ ತಂಡವು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲಿದೆ.

ADVERTISEMENT

ತವರಿನಲ್ಲಿ ಆಡುವ ಅನುಕೂಲದ ಜೊತೆಗೆ ಆಸ್ಟ್ರೇಲಿಯಾದ ಮೇಲೆ ಎಂಟು ವಿಕೆಟ್‌ಗಳ ಅಮೋಘ ಜಯಗಳಿಸಿ ಉತ್ಸಾಹದಲ್ಲಿರುವ  ಶ್ರೀಲಂಕಾ ಈ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ.

ಪ್ರತಿಕೂಲ ಹವಾಮಾನದಿಂದಾಗಿ ಐರ್ಲೆಂಡ್‌ ವಿರುದ್ಧ ರದ್ದಾದ ಪಂದ್ಯದಲ್ಲಿ ಪಡೆದ ಒಂದು ಪಾಯಿಂಟ್ ಸೇರಿದಂತೆ ಜಿಂಬಾಬ್ವೆ ಒಟ್ಟು ಐದು ಪಾಯಿಂಟ್ಸ್ ಸಂಗ್ರಹಿಸಿದ ಪರಿಣಾಮ ಆಸ್ಟ್ರೇಲಿಯಾ ತಂಡ (4 ಅಂಕ) ಲೀಗ್‌ ಹಂತದಲ್ಲೇ ಗಂಟುಮೂಟೆ ಕಟ್ಟಬೇಕಾಯಿತು.

ಆರಂಭ ಆಟಗಾರ ಪಥುಮ್ ನಿಸಾಂಕ ಅವರು ಆಸ್ಟ್ರೇಲಿಯಾ ವಿರುದ್ಧ ಶತಕದೊಡನೆ ಲಯಕ್ಕೆ ಮರಳಿರುವುದು ಶ್ರೀಲಂಕಾ ಪಾಲಿಗೆ ಮುದ ನೀಡುವ ಅಂಶ. ಕೀಪರ್– ಬ್ಯಾಟರ್ ಕುಸಲ್ ಮೆಂಡಿಸ್‌ ಅವರು ಒಳ್ಳೆಯ ಲಯ ಮುಂದುವರಿಸಿದ್ದು, ಅರ್ಧ ಶತಕ ಬಾರಿಸಿದ್ದಾರೆ. ಆದರೆ ಇನ್ನೊಬ್ಬ ಆರಂಭ ಆಟಗಾರ ಕುಸಲ್ ಪೆರೀರಾ ಅಷ್ಟೇನೂ ಯಶಸ್ಸು ಗಳಿಸಿಲ್ಲ.

‘ಬ್ಯಾಟರ್‌ಗಳು ಪರಿಪೂರ್ಣವಾಗಿ ಆಡಿದರು. ಪಥುಮ್ ಅತ್ಯುತ್ತಮ ಟಿ20 ಇನಿಂಗ್ಸ್ ಆಡಿದರು. ಕುಸಲ್ ಮೆಂಡಿಸ್‌ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಸಾಮರ್ಥ್ಯಕ್ಕೆ ತಕ್ಕಂತೆ ಆಡಿದಲ್ಲಿ ನಾವು ಬಯಸಿದ ಫಲಿತಾಂಶ ಪಡೆಯಬಹುದು’ ಎಂದು ಶ್ರೀಲಂಕಾದ ಬ್ಯಾಟಿಂಗ್ ಕೋಚ್‌ ವಿಕ್ರಮ್ ರಾಥೋಡ್ ಹೇಳಿದರು. 

ಆಸ್ಟ್ರೇಲಿಯಾ ವಿರುದ್ಧ 23 ರನ್‌ಗಳ ಅಚ್ಚರಿಯ ಗೆಲುವು ಸೇರಿದಂತೆ ಜಿಂಬಾಬ್ವೆ ಲೀಗ್ ಹಂತದಲ್ಲಿ ಉತ್ತಮವಾಗಿ ಆಡಿದೆ. ಆರಂಭ ಆಟಗಾರ ಬ್ರಿಯಾನ್ ಬೆನೆಟ್ ಎರಡು ಪಂದ್ಯಗಳಲ್ಲಿ ಅಜೇಯ 64 ಮತ್ತು ಅಜೇಯ 48 ರನ್ ಗಳಿಸಿದ್ದಾರೆ. ಅನುಭವಿ ವೇಗಿ ಬ್ಲೆಸಿಂಗ್ ಮುಝರಾಬಾನಿ ಉತ್ತಮ ಯಶಸ್ಸು ಗಳಿಸಿದ್ದಾರೆ. ಹೀಗಾಗಿ ತಂಡವನ್ನು ಕಡೆಗಣಿಸುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.