ADVERTISEMENT

ಅಂತೂ ಇಂತೂ ಗೆದ್ದ ದಕ್ಷಿಣ ಆಫ್ರಿಕಾ ತಂಡ

ಪ್ರಿಟೊರಿಯಸ್–ಮಾರಿಸ್ ದಾಳಿಗೆ ಕುಸಿದ ಶ್ರೀಲಂಕಾ; ಫಾಫ್‌ ಡುಪ್ಲೆಸಿ – ಹಾಶೀಂ ಆಮ್ಲಾ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:44 IST
Last Updated 28 ಜೂನ್ 2019, 19:44 IST
ದಕ್ಷಿಣ ಆಫ್ರಿಕಾದ ಡ್ವೇನ್ ಪ್ರಿಟೊರಿಯಸ್ ಮತ್ತು ಕ್ರಿಸ್ ಮಾರಿಸ್ ಅವರ ಸಂಭ್ರಮ
ದಕ್ಷಿಣ ಆಫ್ರಿಕಾದ ಡ್ವೇನ್ ಪ್ರಿಟೊರಿಯಸ್ ಮತ್ತು ಕ್ರಿಸ್ ಮಾರಿಸ್ ಅವರ ಸಂಭ್ರಮ   

ಚೆಸ್ಟರ್‌ ಲಿ ಸ್ಟ್ರೀಟ್ (ಎಎಫ್‌ಪಿ): ಟೂರ್ನಿಯ ಸೆಮಿಫೈನಲ್ ಪ್ರವೇಶದ ಅವಕಾಶವನ್ನು ಈಗಾಗಲೇ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ಶ್ರೀಲಂಕಾ ತಂಡದ ಕನಸನ್ನೂ ಮುರುಟಿ ಹಾಕಿತು. ರಿವರ್‌ ಸೈಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಾಫ್ ಡುಪ್ಲೆಸಿ ನಾಯಕತ್ವದ ತಂಡವು 9 ವಿಕೆಟ್‌ಗಳಿಂದ ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು 49.3 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್‌ ಆಯಿತು. ಪ್ರಿಟೊರಿಯಸ್ (25ಕ್ಕೆ3) ಮತ್ತು ಕ್ರಿಸ್ ಮಾರಿಸ್ (46ಕ್ಕೆ3) ಅವರು ಲಂಕಾದ ಬ್ಯಾಟಿಂಗ್ ಬಲವನ್ನು ಮಟ್ಟಹಾಕಿದರು. ಕಗಿಸೊ ರಬಾಡ ಕೂಡ ಎರಡು ಪ್ರಮುಖ ವಿಕೆಟ್‌ಗಳನ್ನು ಕಿತ್ತು ತಮ್ಮ ತಂಡಕ್ಕೆ ಕಾಣಿಕೆ ನೀಡಿದರು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 37.2 ಓವರ್‌ಗಳಲ್ಲಿ 1 ವಿಕೆಟ್‌ಗೆ 206 ರನ್ ಗಳಿಸಿತು. ಹಾಶೀಂ ಆಮ್ಲಾ (ಔಟಾಗದೆ 80; 105ಎಸೆತ, 5ಬೌಂಡರಿ) ಮತ್ತು ಫಾಫ್ ಡುಪ್ಲೆಸಿ (ಔಟಾಗದೆ 96; 103ಎಸೆತ, 10ಬೌಂಡರಿ, 1ಸಿಕ್ಸರ್) ಮಿಂಚಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.

ಎಂಟನೇ ಪಂದ್ಯವಾಡಿದ ತಂಡಕ್ಕೆ ಇದು ಎರಡನೇ ಜಯ. ಡುಪ್ಲೆಸಿ ಬಳಗವು ಐದು ಪಂದ್ಯಗಳನ್ನು ಸೋತಿದೆ. ಶ್ರೀಲಂಕಾ ತಂಡವು ಏಳು ಪಂದ್ಯಗಳನ್ನಾಡಿದೆ. ಮೂರರಲ್ಲಿ ಸೋತು, ಎರಡರಲ್ಲಿ ಗೆದ್ದಿದೆ. ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಆರು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ತನ್ನ ಪಾಲಿನಲ್ಲಿ ಉಳಿದ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ಸೆಮಿಫೈನಲ್ ಪ್ರವೇಶ ಕಷ್ಟ.

ADVERTISEMENT

ಪ್ರಿಟೊರಿಯಸ್–ಕ್ರಿಸ್ ಮಿಂಚು: ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ದಿಮುತ್ ಕರುಣಾರತ್ನೆ ಅವರನ್ನು ರಬಾಡ ಔಟ್ ಮಾಡಿದರು. ಕುಶಾಲ ಪೆರೆರಾ (30; 34ಎಸೆತ, 4ಬೌಂಡರಿ) ಮತ್ತು ಅವಿಷ್ಕಾ ಫರ್ನಾಂಡೊ (30; 29ಎಸೆತ, 4ಬೌಂಡರಿ) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 67 ರನ್‌ ಗಳಿಸಿದರು. ಇದರಿಂದಾಗಿ ತಂಡವು ಚೇತರಿಸಿಕೊಳ್ಳುವ ನಿರೀಕ್ಷೆ ಮೂಡಿತ್ತು. ಬಲಗೈ ಮಧ್ಯಮವೇಗಿ ಪ್ರಿಟೊರಿಯಸ್ ಸ್ವಿಂಗ್ ಅಸ್ತ್ರಗಳು ಪರಿಣಾಮ ಬೀರತೊಡಗಿದವು. ಹತ್ತನೇ ಓವರ್‌ನಲ್ಲಿ ಕುಶಾಲ ಪೆರೆರಾ ಕ್ಲೀನ್‌ಬೌಲ್ಡ್‌ ಆದರು. 12ನೇ ಓವರ್‌ನಲ್ಲಿ ಅವಿಷ್ಕಾ ಔಟಾದರು.ಇನ್ನೊಂದು ಬದಿಯಿಂದ ದಾಳಿ ಆರಂಭಿಸಿದ ಕ್ರಿಸ್ ಮಾರಿಸ್ ಕೂಡ ವಿಕೆಟ್‌ಗಳ ಬೇಟೆಯಾಡಿದರು.

ಏಂಜೆಲೊ ಮ್ಯಾಥ್ಯೂಸ್ ಇಲ್ಲಿ ಬಹಳ ಹೊತ್ತು ನಿಲ್ಲದಂತೆ ಮಾರಿಸ್ ನೋಡಿಕೊಂಡರು. ಇದರಿಂದಾಗಿ ತಂಡವು 22 ಓವರ್‌ಗಳು ಮುಗಿಯುಷ್ಟರಲ್ಲಿ ನೂರು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಬ್ಯಾಟಿಂಗ್ ಪಡೆಯ ಮೇಲಿದ್ದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದ ಪ್ರಿಟೊರಿಯಸ್ ಮತ್ತು ಮಾರಿಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಕುಶಾಲ ಮೆಂಡಿಸ್, ವಿಕೆಟ್‌ ಪ್ರಿಟೊರಿಯಸ್ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.