ADVERTISEMENT

ಚಾಂಡಿಮಲ್ ಶತಕ: ಶ್ರೀಲಂಕೆಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 15:24 IST
Last Updated 10 ಜುಲೈ 2022, 15:24 IST
ದಿನೇಶ್ ಚಾಂಡಿಮಲ್ ಬ್ಯಾಟಿಂಗ್ ಸೊಬಗು  –ಎಎಫ್‌ಪಿ ಚಿತ್ರ
ದಿನೇಶ್ ಚಾಂಡಿಮಲ್ ಬ್ಯಾಟಿಂಗ್ ಸೊಬಗು  –ಎಎಫ್‌ಪಿ ಚಿತ್ರ   

ಗಾಲ್: ಬಲಗೈ ಬ್ಯಾಟರ್ ದಿನೇಶ್ ಚಾಂಡಿಮಲ್ ಗಳಿಸಿದ ಅಮೋಘ ಶತಕದ ಬಲದಿಂದ ಶ್ರೀಲಂಕಾ ತಂಡವು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಗಾಲ್ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಲಂಕಾ ತಂಡವು 149 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 431 ರನ್ ಗಳಿಸಿತು. 67 ರನ್‌ಗಳ ಮುನ್ನಡೆಯೂ ಸಾಧಿಸಿದೆ. ಶತಕ ಗಳಿಸಿರುವ ದಿನೇಶ್ (ಬ್ಯಾಟಿಂಗ್ 118; 232ಎ, 4X0, 6X1) ಮತ್ತು ರಮೇಶ್ ಮೆಂಡಿಸ್ (ಬ್ಯಾಟಿಂಗ್ 7) ಕ್ರೀಸ್‌ನಲ್ಲಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವು 110 ಓವರ್‌ಗಳಲ್ಲಿ 364 ಗಳಿಸಿತ್ತು. ಅದಕ್ಕುತ್ತರವಾಗಿ ಆತಿಥೇಯ ತಂಡದ ನಾಯಕ ದಿಮುತ ಕರುಣರತ್ನೆ, ಕುಶಾಲ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್ ಮತ್ತು ಕಮಿಂದು ಮೆಂಡಿಸ್ ಅರ್ಧಶತಕಗಳನ್ನು ಹೊಡೆದರು. ಇದರಿಂದಾಗಿ ತಂಡವು ಮುನ್ನಡೆ ಸಾಧಿಸುವ ಹಾದಿ ಸುಲಭವಾಯಿತು.

ADVERTISEMENT

ಶ್ರೀಲಂಕಾದ ಐದನೇ ಕ್ರಮಾಂಕದ ಬ್ಯಾಟರ್ ದಿನೇಶ್ ತಾಳ್ಮೆಯ ಬ್ಯಾಟಿಂಗ್ ಮುಂದೆ ಬೌಲರ್‌ಗಳ ಯೋಜನೆಗಳು ಫಲಿಸಲಿಲ್ಲ. ಸ್ವೀಪ್, ಡ್ರೈವ್‌ಗಳನ್ನು ಪ್ರಯೋಗಿಸಿದ ದಿನೇಶ್ ಚೆಂದದ ಆಟವಾಡಿದರು.

ಪ್ರವಾಸಿ ತಂಡದ ಅನುಭವಿ ಬೌಲರ್‌ ಮತ್ತು ನಾಯಕ ಪ್ಯಾಟ್ ಕಮಿನ್ಸ್‌ ಇನಿಂಗ್ಸ್‌ನಲ್ಲಿ ಇದುವರೆಗೆ ಒಂದೂ ವಿಕೆಟ್ ಪಡೆದಿಲ್ಲ. ವೇಗಿ ಮಿಚೆಲ್ ಸ್ಟಾರ್ಕ್, ಸ್ಪಿನ್ನರ್ ನೇಥನ್ ಲಯನ್ ಮತ್ತು ಮಿಚೆಲ್ ಸ್ವಿಪ್ಸನ್ ತಲಾ ಎರಡು ವಿಕೆಟ್ ಗಳಿಸಿದ್ದಾರೆ. ಆದರೆ, ಬಹಳಷ್ಟು ರನ್‌ಗಳನ್ನೂ ಬಿಟ್ಟುಕೊಟ್ಟಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 110 ಓವರ್‌ಗಳಲ್ಲಿ 364, ಶ್ರೀಲಂಕಾ: 149 ಓವರ್‌ಗಳಲ್ಲಿ 6ಕ್ಕೆ431 (ದಿಮುತ ಕರುಣರತ್ನೆ 86, ಕುಶಾಲ ಮೆಂಡಿಸ್ 85, ಏಂಜೆಲೊ ಮ್ಯಾಥ್ಯೂಸ್ 52, ದಿನೇಶ್ ಚಾಂಡಿಮಲ್ ಬ್ಯಾಟಿಂಗ್ 118, ಕಮಿಂದು ಮೆಂಡಿಸ್ 61, ಮಿಚೆಲ್ ಸ್ಟಾರ್ಕ್‌ 47ಕ್ಕೆ2, ನೇಥನ್ ಲಯನ್ 160ಕ್ಕೆ2, ಮಿಚೆಲ್ ಸ್ವಿಪ್ಸನ್ 90ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.