ADVERTISEMENT

ಶ್ರೀಲಂಕಾ ತಂಡಕ್ಕೆ ಮಹತ್ವದ ಪಂದ್ಯ

ಮಾಲಿಂಗ, ಮ್ಯಾಥ್ಯೂಸ್ ಮೇಲೆ ಕಣ್ಣು; ದಕ್ಷಿಣ ಆಫ್ರಿಕಾಕ್ಕೆ ಔಪಚಾರಿಕ ಪಂದ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 20:00 IST
Last Updated 27 ಜೂನ್ 2019, 20:00 IST
   

ಚೆಸ್ಟರ್‌ ಲಿ ಸ್ಟ್ರೀಟ್, ಇಂಗ್ಲೆಂಡ್: ನಾಕೌಟ್ ಹಂತ ತಲುಪುವ ತಂಡಗಳಲ್ಲಿ ಒಂದು ಎಂದು ಬಿಂಬಿಸಲಾಗಿದ್ದ ದಕ್ಷಿಣ ಆಫ್ರಿಕಾ ಹಿಂದೆಂದೂ ಕಾಣದಂತಹ ಹೀನಾಯ ಸೋಲನುಭವಿಸಿದೆ. ಟೂರ್ನಿಯಿಂದಲೇ ಹೊರಬಿದ್ದಾಗಿದೆ. ಇದೀಗ ಔಪಚಾರಿಕ ಪಂದ್ಯಗಳಲ್ಲಿ ಆಡಿ ಗೆದ್ದು ಗೌರವ ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದೆ.

ಸೆಮಿಫೈನಲ್ ಪ್ರವೇಶಿಸುವ ಸಣ್ಣ ಅವಕಾಶವೊಂದನ್ನು ಉಳಿಸಿ ಕೊಂಡಿರುವ ಶ್ರೀಲಂಕಾ ತಂಡವನ್ನು ಶುಕ್ರವಾರ ದಕ್ಷಿಣ ಆಫ್ರಿಕಾ ಎದುರಿಸಲಿದೆ. ತನ್ನ ಹೋದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಮಣಿಸಿತ್ತು. ಅನುಭವಿ ವೇಗಿ ಲಸಿತ್ ಮಾಲಿಂಗ್ ಅವರು ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ ಲಂಕಾ ತಂಡವು 232 ರನ್‌ಗಳ ಸಾಧಾರಣ ಮೊತ್ತದ ಗುರಿಯನ್ನು ನೀಡಿತ್ತು. ಇಂಗ್ಲೆಂಡ್ ತಂಡವನ್ನು 212 ರನ್‌ಗಳಿಗೆ ಕಟ್ಟಿಹಾಕಿತ್ತು. ಸ್ಪಿನ್ನರ್‌ ಧನಂಜಯ ಡಿಸಿಲ್ವಾ ಕೂಡ ಮೂರು ವಿಕೆಟ್ ಪಡೆದು ಮಹತ್ವದ ಕಾಣಿಕೆ ನೀಡಿದ್ದರು. ಅದೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಫರ್ನಾಂಡೊ, ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್ ಅವರು ಲಯಕ್ಕೆ ಮರಳಿದ್ದರು.

ಮ್ಯಾಥ್ಯೂಸ್ ಔಟಾಗದೆ 85 ರನ್‌ ಗಳಿಸಿದ್ದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡುವಲ್ಲಿ ಇನ್ನೂ ವಿಫಲರಾಗಿರುವುದು ತಂಡಕ್ಕೆ ನಿಜವಾದ ತಲೆನೋವಾಗಿದೆ. ಈ ವಿಭಾಗದಲ್ಲಿ ಸುಧಾರಣೆ ಮಾಡಿಕೊಂಡು ಕಣಕ್ಕಿಳಿದರೆ ದಕ್ಷಿಣ ಆಫ್ರಿಕಾವನ್ನು ಎದುರಿಸುವುದು ಸುಲಭ.

ADVERTISEMENT

ಈ ಪಂದ್ಯದಲ್ಲಿ ಲಂಕಾ ತಂಡವು ಗೆದ್ದರೆ ಸೆಮಿಫೈನಲ್‌ಗೆ ಸಾಗುವ ಅವಕಾಶ ಮತ್ತಷ್ಟು ಹೆಚ್ಚಲಿದೆ. ಸೋತರೆ, ಟೂರ್ನಿಯಿಂದ ಹೊರಬಿದ್ದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಜೊತೆಗೂಡಲಿದೆ!

ತಂಡಗಳು

ಶ್ರೀಲಂಕಾ: ದಿಮುತ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವಾ, ಅವಿಷ್ಕಾ ಫರ್ನಾಂಡೊ, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ ಮೆಂಡಿಸ್, ಜೀವನ್ ಮೆಂಡಿಸ್, ಕುಶಾಲ ಪೆರೆರಾ, ತಿಸಾರ ಪೆರೆರಾ, ನುವಾನ ಪ್ರದೀಪ್, ಮಿಲಿಂದಾ ಸಿರಿವರ್ಧನೆ, ಲಾಹಿರು ತಿರಿಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ.

ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿ (ನಾಯಕ), ಹಾಶೀಂ ಆಮ್ಲಾ, ಕ್ವಿಂಟನ್ ಡಿಕಾಕ್, ಜೆಪಿ ಡುಮಿನಿ, ಬೆರನ್ ಹೆನ್ರಿಕ್ಸ್, ಏಡನ್ ಮರ್ಕರಮ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೊರಿಯೊ, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ಇಮ್ರಾನ್ ತಾಹೀರ್, ರಸ್ಸಿ ವ್ಯಾನ್ ಡರ್ ಡಸೆನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.