ಐಪಿಎಲ್ ಲಾಂಛನ
ಚಿತ್ರ: IPL ವೆಬ್‌ಸೈಟ್
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಬ್ಯಾಟರ್ ಡೊನೊವನ್ ಫೆರೀರಾ ಅವರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಮರಳದಿರಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್ ವಿಲ್ ಜಾಕ್ಸ್ ಅವರು ಮುಂಬೈ ಇಂಡಿಯನ್ಸ್‌ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟರ್ ಫೆರೀರಾ ಅವರು ತಮ್ಮ ನಿರ್ಧಾರವನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಸ್ಟಾರ್ಕ್ 11 ಪಂದ್ಯಗಳಿಂದ 26.14ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದರು. ಅವರ ನಿರ್ಧಾರವು ಪ್ಲೇ ಆಫ್ ಆಸೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ತಂಡಕ್ಕೆ ನಿರಾಸೆ ಮೂಡಿಸಿದೆ.
ಫೆರೀರಾ ಈ ಋತುವಿನಲ್ಲಿ ಕೇವಲ ಒಂದು ಪಂದ್ಯ ಆಡಿದ್ದರು. ದಕ್ಷಿಣ ಆಫ್ರಿಕಾದ ಇನ್ನೊಬ್ಬ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ ಅವರು ಡೆಲ್ಲಿ ತಂಡದ ಕೊನೆಯ ಮೂರು ಲೀಗ್ ಪಂದ್ಯಗಳನ್ನು ಆಡಿ ತವರಿಗೆ ಮರಳಲಿದ್ದಾರೆ. ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ತಂಡದಲ್ಲಿದ್ದಾರೆ. ಆದರೆ ಡೆಲ್ಲಿ ಉಪನಾಯಕ, ದಕ್ಷಿಣ ಆಫ್ರಿಕಾದ ಇನ್ನೊಬ್ಬ ಬ್ಯಾಟರ್ ಫಾಫ್ ಡುಪ್ಲೆಸಿಸ್ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.
ಕಿಂಗ್ಸ್ ನಿಟ್ಟುಸಿರು:
ಪಂಜಾಬ್ ಕಿಂಗ್ಸ್‌ನ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೋಶ್ ಇಂಗ್ಲಿಸ್ ಅವರು ಪುನರಾರಂಭದ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಆದರೆ ಉಳಿದ ಪಂದ್ಯಗಳಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. 18ರಂದು ಪಂಜಾಬ್ ಕಿಂಗ್ಸ್ ಮರು ಆರಂಭದ ಮೊದಲ ಪಂದ್ಯ ಆಡಲಿದೆ.
ವಿಲ್ ಜಾಕ್ಸ್ ಅವರು ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಮಾನದ ಟಿಕೆಟ್ ಪೋಸ್ಟ್ ಹಾಕುವ ಮೂಲಕ ಲೀಗ್‌ನಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ. ಆದರೆ ಸ್ವದೇಶದ ಬಟ್ಲರ್ ಅವರ ಹಾಗೆಯೇ ಪ್ಲೇ ಆಫ್ ನಂತರ ಜಾಕ್ಸ್ ಕೂಡ ತಮ್ಮ ರಾಷ್ಟ್ರೀಯ ತಂಡ ಸೇರಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಇವರಿಬ್ಬರು ಆಡಲಿದ್ದಾರೆ.
ಮುಂಬೈ ಇಂಡಿಯನ್ಸ್ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಉಳಿದೆರಡೂ ಪಂದ್ಯ ಗೆದ್ದರೆ ಪ್ಲೇಆಫ್ ಖಚಿತವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.