ADVERTISEMENT

WPL 2025 | ವಾರಿಯರ್ಸ್‌ಗೆ ಅಳಿವು ಉಳಿವಿನ ಪಂದ್ಯ; ಮುಂಬೈ ಇಂಡಿಯನ್ಸ್‌ ಎದುರಾಳಿ

ಪಿಟಿಐ
Published 6 ಮಾರ್ಚ್ 2025, 0:30 IST
Last Updated 6 ಮಾರ್ಚ್ 2025, 0:30 IST
<div class="paragraphs"><p>ಮಹಿಳಾ ಪ್ರೀಮಿಯರ್ ಲೀಗ್‌</p></div>

ಮಹಿಳಾ ಪ್ರೀಮಿಯರ್ ಲೀಗ್‌

   

ಲಖನೌ: ಕ್ಷೀಣವಾಗುತ್ತಿರುವ ಪ್ಲೇ ಆಫ್‌ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಯುಪಿ ವಾರಿಯರ್ಸ್ ತಂಡ, ಗುರುವಾರ ಇಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಆತಿಥೇಯ ವಾರಿಯರ್ಸ್‌ ತಂಡ ಏಕನಾ ಕ್ರೀಡಾಂಗಣದಲ್ಲಿ ಎರಡು ದಿನ ಹಿಂದೆ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ಕೈಲಿ 81 ರನ್‌ಗಳಿಂದ ಸೋಲನುಭವಿಸಿದ್ದು, ಐದು ತಂಡಗಳ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಇಳಿದಿದೆ. ಅದರ ನೆಟ್‌ ರನ್‌ ರೇಟ್‌ ಕೂಡ ಕುಸಿದಿದೆ.

ADVERTISEMENT

ಬೆತ್‌ ಮೂನಿ ಅವರ ಅಮೋಘ ಆಟವು, ಗುಜರಾತ್ ತಂಡ 5 ವಿಕೆಟ್‌ಗೆ 186 ರನ್‌ಗಳ ಮೊತ್ತ ಪೇರಿಸಲು ನೆರವಾಗಿತ್ತು. ಇದನ್ನು ಬೆನ್ನಟ್ಟಿದ ವಾರಿಯರ್ಸ್‌ ಬ್ಯಾಟರ್‌ಗಳು ವೈಫಲ್ಯ ಕಂಡರು. ಪ್ರಮುಖ ಬ್ಯಾಟರ್‌ಗಳು ವಿಫಲರಾಗುತ್ತಿರುವುದು ಯುಪಿ ವಾರಿಯರ್ಸ್ ತಂಡದ ಚಿಂತೆಗೆ ಕಾರಣವಾಗಿದೆ. ಇದ್ದುದರಲ್ಲಿ ಷಿನೆಲ್‌ ಹೆನ್ರಿ ಸ್ವಲ್ಪ ಯಶಸ್ಸು ಗಳಿಸಿದ್ದಾರೆ. ಅವರು ಈ ಬಾರಿ 34.50 ಸರಾಸರಿಯಲ್ಲಿ 138 ರನ್ ಗಳಿಸಿದ್ದಾರೆ.

ಮಹಿಳಾ ಬಿಗ್‌ ಬ್ಯಾಷ್‌ನಲ್ಲಿ ಆರಂಭ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡಿದ್ದ ಜಾರ್ಜಿಯಾ ವೋಲ್ ಅವರಿಗೆ ಆರಂಭ ಆಟಗಾರ್ತಿಯ ಸ್ಥಾನ ನೀಡುವ ಸಾಧ್ಯತೆಯೂ ಇದೆ. ಮಧ್ಯಮ ಕ್ರಮಾಂಕದಲ್ಲಿ ಗ್ರೇಸ್‌ ಹ್ಯಾರಿಸ್‌ ಅವರ ಹೊಣೆಯೂ ಹೆಚ್ಚು ಇದೆ. ನಾಯಕಿ ದೀಪ್ತಿ ಶರ್ಮಾ ಅವರು ತಮ್ಮ ಜವಾಬ್ದಾರಿಗೆ ತಕ್ಕಂತೆ ಉಪಯುಕ್ತ ಇನಿಂಗ್ಸ್‌ ಆಡಬೇಕಾಗಿದೆ.

ಒಂದೆಡೆ ವಾರಿಯರ್ಸ್‌ ಪರದಾಡುತ್ತಿದ್ದರೆ ಇನ್ನೊಂದು ಕಡೆ ಮುಂಬೈ ಇಂಡಿಯನ್ಸ್ ಬಹುತೇಕ ಉತ್ತಮ ಸ್ಥಿತಿಯಲ್ಲಿದೆ. ಹರ್ಮನ್‌ಪ್ರೀತ್‌ ಕೌರ್‌ ಪಡೆ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವ ಇರಾದೆಯಲ್ಲಿದೆ.

ಡಬ್ಲ್ಯುಪಿಎಲ್‌ನಲ್ಲಿ ಲೀಗ್ ನಂತರ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ ಪಂದ್ಯ ಆಡಲಿದ್ದು, ಈ ಪಂದ್ಯದ ವಿಜೇತರು ಫೈನಲ್‌ಗೆ ತೇರ್ಗಡೆ ಆಗುತ್ತಾರೆ.

2023ರಲ್ಲಿ, ಮೊದಲ ವರ್ಷ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್‌ಗೆ ಮೂರು ಪಂದ್ಯಗಳು ಆಡಲು ಇದ್ದು ಅಗ್ರಸ್ಥಾನದ ಅವಕಾಶ ಉತ್ತಮವಾಗಿದೆ. ಹೀಗಾಗಿ ಈ ತಂಡ ಪ್ರತಿ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ.

ಹರ್ಮನ್‌ಪ್ರೀತ್ ಅವರು ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ತಿಣುಕಾಡುತ್ತಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್‌ ನಾಟ್‌ ಶಿವರ್–ಬ್ರಂಟ್‌ ಸಹ ಲೀಲಾಜಾಲವಾಗಿ ಆಡುತ್ತಿಲ್ಲ. ಅದರೆ ತಂಡದ ಯಶಸ್ಸಿನಲ್ಲಿ ಅವರ ಪಾತ್ರ ಹಿರಿದು. ಐದು ಪಂದ್ಯಗಳಿಂದ ಮೂರು ಅರ್ಧ ಶತಕ ಸಹಿತ 272 ರನ್ ಗಳಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಮತ್ತು ಜಿಯೊ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.