ADVERTISEMENT

ಇಂಗ್ಲೆಂಡ್ ವೈಫಲ್ಯಕ್ಕೆ ಐಪಿಎಲ್ ಕಾರಣವಲ್ಲ: ಕೆವಿನ್ ಪೀಟರ್ಸನ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:19 IST
Last Updated 21 ಜನವರಿ 2022, 16:19 IST
ಕೆವಿನ್ ಪೀಟರ್ಸನ್
ಕೆವಿನ್ ಪೀಟರ್ಸನ್    

ಮಸ್ಕತ್: ಆ್ಯಷಸ್‌ ಸರಣಿಯಲ್ಲಿ ಸೋತಿರುವ ಇಂಗ್ಲೆಂಡ್ ತಂಡದ ಕಳಪೆ ಆಟಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಆಡಿರುವುದು ಎಂಬ ಆರೋಪ ಮೂರ್ಖತನದ್ದು ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

‘ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನ ಅವಸಾನಕ್ಕಾಗಿ ಐಪಿಎಲ್‌ ಟೂರ್ನಿಯನ್ನು ಟೀಕಿಸುವುದು ಸರಿಯಲ್ಲ. ಈ ಕುರಿತು ಹಿಂದೆಯೂ ಹೇಳಿದ್ದೇನೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಟೂರ್ನಿಗಳು ಕ್ಷೀಣಿಸಿವೆ. ಆ ವ್ಯವಸ್ಥೆಯನ್ನು ಬಲಪಡಿಸಬೇಕು’ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಇಲ್ಲಿ ನಡೆಯುತ್ತಿರುವ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ವರ್ಲ್ಡ್‌ ಜೈಂಟ್ಸ್‌ ತಂಡವನ್ನು ಕೆವಿನ್ ಪ್ರತಿನಿಧಿಸುತ್ತಿದ್ದಾರೆ.

ADVERTISEMENT

‘ಟೆಸ್ಟ್ ತಂಡದಲ್ಲಿ ಆಡುವ ಬೆನ್ ಸ್ಟೋಕ್ಸ್‌, ಜಾನಿ ಬೆಸ್ಟೊ ಮತ್ತು ಜಾಸ್ ಬಟ್ಲರ್ ಅವರು ಐಪಿಎಲ್‌ನಲ್ಲಿ ಆಡುತ್ತಾರೆ. ಆದ್ದರಿಂದ ಇಡೀ ತಂಡದ ಮೇಲೆ ಹೇಗೆ ಪರಿಣಾಮವಾಗುತ್ತದೆ’ ಎಂದು ಹೇಳಿದರು.

‘ಬಯೋಬಬಲ್‌ನಲ್ಲಿ ಆಡುವುದು ನಿಜಕ್ಕೂ ಒತ್ತಡ ಹೆಚ್ಚಿಸುತ್ತದೆ. ನಾನು ಯಾವತ್ತೂ ಬಬಲ್‌ ವ್ಯವಸ್ಥೆಯಲ್ಲಿ ಆಡಿಲ್ಲ ನಿಜ. ಆದರೆ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಒಬ್ಬಂಟಿಯಾಗಿ ಇರಬೇಕು. ಮುಕ್ತವಾಗಿ ಕಾಫಿ ಶಾಪ್‌ಗೆ ಹೋಗುವ ಅವಕಾಶವೂ ಇಲ್ಲ. ಇರುವ ಹೋಟೆಲ್‌ನಲ್ಲಿಯೇ ತಿರುಗಾಡಲೂ ನಿರ್ಬಂಧಗಳು ಇವೆ. ಇದು ಒತ್ತಡ ಹೆಚ್ಚಿಸುವುದು ಸಹಜ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.