ADVERTISEMENT

ಪಂದ್ಯಶ್ರೇಷ್ಠ ಆಟಗಾರನನ್ನು ಬೆಂಚ್‌ ಮೇಲೆ ಕೂರಿಸಿದ್ದು ನ್ಯಾಯವೇ?

ಕುಲದೀಪ್ ಯಾದವ್ ಕೈಬಿಟ್ಟಿದ್ದಕ್ಕೆ ಗಾವಸ್ಕರ್ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 16:21 IST
Last Updated 22 ಡಿಸೆಂಬರ್ 2022, 16:21 IST
ಸುನೀಲ್ ಗಾವಸ್ಕರ್
ಸುನೀಲ್ ಗಾವಸ್ಕರ್   

ನವದೆಹಲಿ (ಪಿಟಿಐ): ಬಾಂಗ್ಲಾದೇಶದ ವಿರುದ್ಧ ಗುರುವಾರ ಆರಂಭವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕುಲದೀಪ್ ಯಾದವ್ ಅವರಿಗೆ ಆಡುವ ಅವಕಾಶ ನೀಡದ ಭಾರತ ತಂಡದ ವ್ಯವಸ್ಥಾಪಕಸಮಿತಿಯ ವಿರುದ್ಧ ಸುನೀಲ್ ಗಾವಸ್ಕರ್ ಕಿಡಿ ಕಾರಿದ್ದಾರೆ.

‘ಕಳೆದ ಪಂದ್ಯದಲ್ಲಿ ಶ್ರೇಷ್ಠ ಆಟಗಾರ ಗೌರವ ಗಳಿಸಿದ ಆಟಗಾರನನ್ನು ಕೈಬಿಟ್ಟಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ಪದಪ್ರಯೋಗವನ್ನು ನಾನು ಸಭ್ಯತೆಗಾಗಿ ಬಳಸುತ್ತಿದ್ದೇನೆ. ಆದರೆ ಇನ್ನೂ ಕಟುವಾದ ಪದಗಳಲ್ಲಿ ಟೀಕಿಸಬೇಕೆನಿಸಿದರೂ ನಿಯಂತ್ರಿಸಿಕೊಂಡಿದ್ದೇನೆ’ ಎಂದು ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಂಡದಲ್ಲಿ ಇನ್ನೂ ಇಬ್ಬರು ಸ್ಪಿನ್ನರ್ (ಅಕ್ಷರ್ ಪಟೇಲ್ ಹಾಗೂ ಅಶ್ವಿನ್) ಇದ್ದಾರೆ. ಅವರಲ್ಲಿ ಒಬ್ಬರನ್ನು ಕೈಬಿಟ್ಟು ಕುಲದೀಪ್ ಅವರನ್ನು ಉಳಿಸಿಕೊಳ್ಳಬಹುದಿತ್ತು. ಕುಲದೀಪ್ ಜೊತೆಗೇ ಈ ರೀತಿ ಪದೇ ಪದೇ ಆಗುತ್ತಿದೆ. ಯಾರಾದರೂ ಒಬ್ಬರು ಕುಲದೀಪ್‌ ಬೆಂಬಲಕ್ಕೆ ನಿಲ್ಲಬೇಕು. ಇಲ್ಲದಿದ್ದರೆ ಆ ಪ್ರತಿಭಾವಂತ ಆಟಗಾರ ದೃತಿಗೆಟ್ಟು ಹೋಗುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಎಂಟು ವಿಕೆಟ್ ಪಡೆದ ಆಟಗಾರರನ್ನು ಬಿಟ್ಟಿರುವುದು ಸೋಜಿಗ. ಈ ಪಿಚ್‌ನಲ್ಲಿ ಅವರು ಆಡಬೇಕಿತ್ತು’ ಎಂದು ಗಾವಸ್ಕರ್ ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ ವಾಹಿನಿಯಲ್ಲಿ ಹೇಳಿದ್ದಾರೆ.

ADVERTISEMENT

‘ಪಂದ್ಯದ ವಿಜಯದ ರೂವಾರಿಯನ್ನು ಬೆಂಚ್ ಕಾಯಿಸಲು ಬಿಡುವುದು ಯಾವ ನ್ಯಾಯ. ತಂಡದ ಚಿಂತಕರು ಇದನ್ನು ಗಂಭೀರವಾಗಿ ಯೋಚಿಸಬೇಕು. ಈ ಹಿಂದೆ ಟೆಸ್ಟ್‌ವೊಂದರಲ್ಲಿ 303 ರನ್ ಗಳಿಸಿದ್ದ ಕರುಣ್ (ನಾಯರ್) ಅವರನ್ನೂ ನಂತರದ ಹೈದರಾಬಾದ್ ಟೆಸ್ಟ್‌ನಲ್ಲಿ ವೇಗಿಯೊಬ್ಬರನ್ನು ಆಡಿಸುವ ಸಲುವಾಗಿ ಕೈಬಿಡಲಾಗಿತ್ತು. ಈಗ ಕುಲದೀಪ್. ಇದು ಆಘಾತಕಾರಿ ಹಾಗೂ ನಗೆಪಾಟೀಲಿನ ನಿರ್ಧಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಕುಲದೀಪ್ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು. ಅವರು 40 ರನ್‌ ಗಳಿಸಿದ್ದರು.

ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ‘ಮೂರು ದಿನಗಳ ಹಿಂದಷ್ಟೇ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದ ಕುಲದೀಪ್ ಅವರನ್ನು ಕೈಬಿಟ್ಟು ಜೈದೇವ್ ಉನದ್ಕತ್ ಅವರಿಗೆ ಸ್ಥಾನ ನೀಡಿದ್ದು ವಿಲಕ್ಷಣ ನಿರ್ಧಾರ’ ಎಂದಿದ್ದಾರೆ.

ಈ ವಿಷಯವು ಗುರುವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.