ADVERTISEMENT

IPL 2025 | SRH vs KKR: ಹೆನ್ರಿಚ್ ಶತಕ, ಸನ್ ಗೆಲುವು

ಪಿಟಿಐ
Published 25 ಮೇ 2025, 18:34 IST
Last Updated 25 ಮೇ 2025, 18:34 IST
<div class="paragraphs"><p>ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್</p></div>

ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್

   

ನವದೆಹಲಿ: ಹೆನ್ರಿಚ್‌ ಕ್ಲಾಸೆನ್‌ (ಅಜೇಯ 105, 39ಎ, 4X7, 6X9) ಅವರ ಮಿಂಚಿನ ಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಭಾನುವಾರ ಐಪಿಎಲ್‌ ಪಂದ್ಯದಲ್ಲಿ 110 ರನ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿತು.

ಕಳೆದ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಈ ತಂಡಗಳು ಈ ಬಾರಿ ಲೀಗ್‌ ಹಂತದಲ್ಲೇ ಅಭಿಯಾನ ಮುಗಿಸಿದವು. ಪ್ಲೇಆಫ್‌ ರೇಸ್‌ನಿಂದ ಎರಡೂ ತಂಡಗಳು ಮೊದಲೇ ಹೊರಬಿದ್ದಿರುವುದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. ಆದರೆ, ಕೋಲ್ಕತ್ತ ತಂಡವನ್ನು ಸೋಲಿಸಿದ ಸನ್‌ರೈಸರ್ಸ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

ADVERTISEMENT

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೆನ್ರಿಚ್ ಮತ್ತು ಟ್ರಾವಿಸ್ ಹೆಡ್ (76; 40ಎ, 4X6, 6X6) ಅವರ ಅಬ್ಬರದ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 278 ರನ್ ಗಳಿಸಿತು. 

ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತ ತಂಡವು 18.4 ಓವರ್‌ಗಳಲ್ಲಿ 168 ರನ್‌ಗಳಿಸಿ ಹೋರಾಟನನ್ನು ಮುಗಿಸಿತು. ಸುನಿಲ್‌ ನಾರಾಯಣ್‌ (31), ಮನೀಷ್‌ ಪಾಂಡೆ (30), ಹರ್ಷಿತ್‌ ರಾಣಾ (34) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಪಾಂಡೆ ಮತ್ತು ರಾಣಾ ಎಂಟನೇ ವಿಕೆಟ್‌ ಜೊತೆಯಾಟದಲ್ಲಿ 52 (22ಎ) ರನ್‌ ಸೇರಿಸಿ ಗಮನ ಸೆಳೆದರೂ ಗೆಲುವಿನ ಗುರಿ ಬಹಳ ದೂರವಿತ್ತು.

ಸನ್‌ರೈಸರ್ಸ್‌ನ ಜಯದೇವ್ ಉನದ್ಕತ್, ಇಶಾನ್‌ ಮಾಲಿಂಗ ಮತ್ತು ಹರ್ಷ್‌ ದುಬೆ ತಲಾ ಮೂರು ವಿಕೆಟ್‌ ಪಡೆದು ಎದುರಾಳಿ ತಂಡವನ್ನು ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ಹೆನ್ರಿಚ್‌ ಅಬ್ಬರ:

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನಾಯಕ ಪ್ಯಾಟ್‌ ಕಮಿನ್ಸ್‌ ನಿರ್ಧಾರವನ್ನು ಸಮರ್ಥಿಸುವಂತೆ ಹೆಡ್‌ ಮತ್ತು ಕ್ಲಾಸೆನ್‌ ಅಬ್ಬರಿಸಿದರು. ಅವರಿಬ್ಬರೂ ಕೋಲ್ಕತ್ತ ನೈಟ್ ರೈಡರ್ಸ್ ಬೌಲಿಂಗ್ ಪಡೆಯನ್ನು ದೂಳೀಪಟ ಮಾಡಿದರು. 

ಹೈದರಾಬಾದ್ ತಂಡವು ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 286 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈಗ ಕೊನೆ ಪಂದ್ಯದಲ್ಲಿಯೂ ಅಂತಹದೇ ಆಟ ತೋರಿಸಿತು. 

ಅಭಿಷೇಕ್ ಶರ್ಮಾ (32; 16ಎ, 4X4, 6X2) ಮತ್ತು ಹೆಡ್ ಅಮೋಘ ಆರಂಭ ನೀಡಿದರು. ಅವರ ಆಟದ ವೇಗಕ್ಕೆ ಕೇವಲ 6.5 ಓವರ್‌ಗಳಲ್ಲಿ 92 ರನ್‌ಗಳು ಹರಿದುಬಂದವು. ಸುನಿಲ್ ನಾರಾಯಣ್ ಬೌಲಿಂಗ್‌ನಲ್ಲಿ ಅಭಿಷೇಕ್ ಅವರು ರಿಂಕು ಸಿಂಗ್‌ಗೆ ಕ್ಯಾಚಿತ್ತರು.

ಆದರೆ ‘ಹಾಲಿ ಚಾಂಪಿಯನ್’ ಕೋಲ್ಕತ್ತಕ್ಕೆ ನಿಜವಾಗಿಯೂ ಸಮಸ್ಯೆ ಶುರುವಾಗಿದ್ದು ಈ ಹಂತದಿಂದ. ಹೆಡ್ ಜೊತೆಗೂಡಿದ ಕ್ಲಾಸೆನ್  ತಮಗೆ ಸಿಕ್ಕ ಅವಕಾಶಗಳಲ್ಲಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ಐಪಿಎಲ್‌ನಲ್ಲಿ ಅತಿ ವೇಗವಾಗಿ ಶತಕ ದಾಖಲಿಸಿದ ನಾಲ್ಕನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ಅವರದ್ದಾಯಿತು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 83 ರನ್‌ ಕಲೆಹಾಕಿದರು. ತಂಡವು 175 ರನ್ ಗಳಿಸಿದಾಗ 12.4 ಓವರ್‌ಗಳಷ್ಟೇ ಆಗಿದ್ದವು. ಹೆಡ್ ವಿಕೆಟ್ ಗಳಿಸಿದ ಸುನಿಲ್ ಅವರು ಜೊತೆಯಾಟಕ್ಕೆ ತಡೆಯೊಡ್ಡಿದರು. ಆದರೆ ಕ್ಲಾಸೆನ್ ಅಬ್ಬರ ಮಾತ್ರ ತಗ್ಗಲಿಲ್ಲ. ಅವರು ಇಶಾನ್ ಕಿಶನ್ (29; 20ಎ) ಸೇರಿ 83 ರನ್‌ಗಳನ್ನು ಸೂರೆ ಮಾಡಿದರು. ಅದರಲ್ಲಿ ಕ್ಲಾಸೆನ್ ಅವರದ್ದೇ ಸಿಂಹಪಾಲು.

ಸಂಕ್ಷಿಪ್ತ ಸ್ಕೋರು:

ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 278 (ಅಭಿಷೇಕ್ ಶರ್ಮಾ 32, ಟ್ರಾವಿಸ್ ಹೆಡ್ 76, ಹೆನ್ರಿಚ್ ಕ್ಲಾಸೆನ್ ಔಟಾಗದೇ 105, ಇಶಾನ್ ಕಿಶನ್ 29, ಸುನಿಲ್ ನಾರಾಯಣ್ 42ಕ್ಕೆ2) ಕೋಲ್ಕತ್ತ ನೈಟ್ ರೈಡರ್ಸ್: 18.4 ಓವರ್‌ಗಳಲ್ಲಿ 168 (ಸುನಿಲ್‌ ನಾರಾಯಣ್‌ 31, ಮನೀಷ್‌ ಪಾಂಡೆ 30, ಹರ್ಷಿತ್‌ ರಾಣಾ 34; ಜಯದೇವ್ ಉನದ್ಕತ್ 24ಕ್ಕೆ 3, ಇಶಾನ್‌ ಮಾಲಿಂಗ 31ಕ್ಕೆ 3, ಹರ್ಷ್‌ ದುಬೆ 34ಕ್ಕೆ 3). ಫಲಿತಾಂಶ: ಸನ್‌ರೈಸರ್ಸ್‌ಗೆ 110 ರನ್‌ಗಳ ಜಯ. ಪಂದ್ಯದ ಆಟಗಾರ: ಹೆನ್ರಿಚ್‌ ಕ್ಲಾಸೆನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.