ADVERTISEMENT

Asia Cup | ಸೇನಾ ಸಂಘರ್ಷ ಪ್ರಸ್ತಾಪ; ನಾಯಕ ಸೂರ್ಯಕುಮಾರ್‌ಗೆ ದಂಡ: ಮೇಲ್ಮನವಿ

ಪಿಟಿಐ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

ದುಬೈ: ಪಾಕಿಸ್ತಾನ ವಿರುದ್ಧ ನಡೆದ ಗುಂಪು ಹಂತದ ಪಂದ್ಯದ ಬಳಿಕ ಸೇನಾ ಸಂಘರ್ಷವನ್ನು
ಪ್ರಸ್ತಾಪಿಸಿದ್ದಕ್ಕೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಪಂದ್ಯ ಸಂಭಾವನೆಯ ಶೇ 30ರಷ್ಟು ದಂಡ ವಿಧಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಈ ಕ್ರಮದ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಆದರೆ, ಟೂರ್ನಿ ಮುಗಿಯುವವರೆಗೂ ಐಸಿಸಿಯು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ADVERTISEMENT

ಸೆ.14ರಂದು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಗೆದ್ದಿತ್ತು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿಸೂರ್ಯಕುಮಾರ್‌ ಪ್ರತಿಕ್ರಿಯಿಸಿ, ‘ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಮತ್ತು ಭಾರತ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇನೆ’ ಎಂದು ಹೇಳಿದ್ದರು. ಇದರ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಐಸಿಸಿಯಲ್ಲಿ ದೂರು ದಾಖಲಿಸಿತ್ತು. 

ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಅವರು ಸೂರ್ಯಕುಮಾರ್‌ ವಿಚಾರಣೆ ನಡೆಸಿದರು. ರಾಜಕೀಯ ಸ್ವರೂಪದ್ದೆನಿಸುವ ಯಾವುದೇ ಹೇಳಿಕೆ ನೀಡದಂತೆಯೂ ಸೂರ್ಯ ಅವರಿಗೆ ಸೂಚಿಸಲಾಗಿದೆ.

ರವೂಫ್‌ಗೆ ದಂಡ, ಫರ್ಹಾನ್‌ಗೆ ಎಚ್ಚರಿಕೆ

ಭಾರತ ವಿರುದ್ಧ ಭಾನುವಾರ ನಡೆದ ಏಷ್ಯಾ ಕಪ್ ಕ್ರಿಕೆಟ್‌ ಸೂಪರ್ ಫೋರ್‌ ಪಂದ್ಯದ ವೇಳೆ ಅನುಚಿತವಾಗಿ ಮತ್ತು ಪ್ರಚೋದನಕಾರಿಯಾಗಿ ವರ್ತಿಸಿದ್ದಕ್ಕೆ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರವೂಫ್ ಅವರಿಗೆ ಪಂದ್ಯ ಸಂಭಾವನೆಯ ಶೇ 30ರಷ್ಟು ದಂಡ ವಿಧಿಸಲಾಗಿದೆ.

ಸಹ ಆಟಗಾರ ಸಾಹಿಬ್‌ಝಾದಾ ಫರ್ಹಾನ್ ಎಚ್ಚರಿಕೆಯನ್ನಷ್ಟೇ ಪಡೆದು ದಂಡದಿಂದ ಪಾರಾದರು. ಆ ಪಂದ್ಯದಲ್ಲಿ ಅರ್ಧ ಶತಕ ಪೂರೈಸಿದ ತಕ್ಷಣ ಫರ್ಹಾನ್‌ ಅವರು ಗಾಳಿಯಲ್ಲಿ ಗುಂಡುಹಾರಿಸುವ ರೀತಿ ಬ್ಯಾಟನ್ನು ಗನ್ನಿನಂತೆ ಹಿಡಿದಿದ್ದರು.

ಶುಕ್ರವಾರ ಮಧ್ಯಾಹ್ನ ಮ್ಯಾಚ್‌ ರೆಫ್ರಿ ರಿಚಿ ರಿಚರ್ಡ್ಸನ್ ಅವರು ಟೀಮ್‌ ಹೋಟೆಲ್‌ನಲ್ಲಿ ಇವರಿಬ್ಬರ ವಿಚಾರಣೆಯನ್ನು ನಡೆಸಿದ್ದಾರೆ ಎಂದು ಟೂರ್ನಿಯ ಮೂಲವೊಂದು ಪಿಟಿಐಗೆ ತಿಳಿಸಿದೆ.

ಇದಕ್ಕೆ ಮೊದಲು ರವೂಫ್ ಮತ್ತು ಫರ್ಹಾನ್ ಅವರು, ಭಾರತ ವಿರುದ್ಧದ ಪಂದ್ಯದಲ್ಲಿ ತಾವು ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ನಂತರ ಇಬ್ಬರೂ, ಟೀಮ್ ಮ್ಯಾನೇಜರ್ ನವೀದ್ ಅಕ್ರಂ ಚೀಮಾ ಜೊತೆ ವಿಚಾರಣೆಗೆ ಹಾಜರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.