ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಿದ್ಧತೆಯಲ್ಲಿರುವ ಭಾರತ ತಂಡದಲ್ಲಿ ಮೂವರು ಆಟಗಾರರು ಗಾಯಗೊಂಡಿರುವುದರಿಂದ ಅವರ ಬದಲಿಗೆ ಸೂರ್ಯಕುಮಾರ್ ಯಾದವ್, ಆರಂಭಿಕ ಆಟಗಾರ ಪೃಥ್ವಿ ಶಾ ಹಾಗೂ ಆಫ್ ಸ್ಪಿನ್ನರ್–ಆಲ್‌ರೌಂಡರ್ ಜಯಂತ್ ಯಾದವ್ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್ ತಂಡದಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ವೇಳೆ ಶುಭಮನ್ ಗಿಲ್ ಗಾಯಗೊಂಡಿದ್ದರೆ, ಕೌಂಟಿ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಅವೇಶ್ ಖಾನ್ ಹೆಬ್ಬೆರಳಿಗೆ ಗಾಯವಾಗಿತ್ತು. ವಾಷಿಂಗ್ಟನ್ ಸುಂದರ್ ಅವರ ಬೆರಳಿಗೂ ಗಾಯವಾಗಿದೆ.
ಇವರ ಬದಲಿಗೆ ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಹಾಗೂ ಜಯಂತ್ ತಂಡವನ್ನು ಸೇರಿಕೊಳ್ಳುವ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿ ಖಚಿತಪಡಿಸಿದ್ದಾರೆ. ಈ ಆಟಗಾರರು ಟಿ20 ಅಂತರರಾಷ್ಟ್ರೀಯ ಸರಣಿಯ ಮಧ್ಯದಲ್ಲೇ (ಈ ಆಟಗಾರರು ಸದ್ಯ ಶ್ರೀಲಂಕಾದಲ್ಲಿರುವ ಭಾರತ ತಂಡದ ಭಾಗವಾಗಿದ್ದಾರೆ) ಇಂಗ್ಲೆಂಡ್‌ಗೆ ತೆರಳಲಿದ್ದಾರೆಯೇ ಅಥವಾ ಸರಣಿ ಮುಕ್ತಾಯದ ಬಳಿಕ ತೆರಳಲಿದ್ದಾರೆಯೇ ಎಂಬುದನ್ನು ನಿರ್ಧರಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುತ್ತಿರುವುದು ಇದೇ ಮೊದಲಾಗಿದೆ.
ಕಠಿಣ ಕೋವಿಡ್ ನಿಯಮಗಳು ಮತ್ತು ಕ್ವಾರಂಟೈನ್ ನಿಯಮಗಳಿಂದಾಗಿ ಈ ಆಟಗಾರರು ಮೊದಲ ಟೆಸ್ಟ್ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳುವುದು ಅನುಮಾನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.