ADVERTISEMENT

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ ವಿರುದ್ಧ ಸೌರಾಷ್ಟ್ರಕ್ಕೆ 1ರನ್ ಅಂತರದ ಜಯ

ಪಿಟಿಐ
Published 6 ಡಿಸೆಂಬರ್ 2025, 14:20 IST
Last Updated 6 ಡಿಸೆಂಬರ್ 2025, 14:20 IST
ದೇವದತ್ತ ಪಡಿಕ್ಕಲ್ 
ದೇವದತ್ತ ಪಡಿಕ್ಕಲ್    

ಅಹಮದಾಬಾದ್: ದೇವದತ್ತ ಪಡಿಕ್ಕಲ್ ಅವರ ಅಮೋಘ ಅರ್ಧಶತಕ ಹಾಗೂ ಆರ್. ಸ್ಮರಣ್ ಅವರ ಉಪಯುಕ್ತ ಕಾಣಿಕೆಯ ಬುನಾದಿಯ ಮೇಲೆ ಗೆಲುವಿನ ಸೌಧ ಕಟ್ಟುವಲ್ಲಿ ಕರ್ನಾಟಕ ಉಳಿದ ಬ್ಯಾಟರ್‌ಗಳು ವಿಫಲರಾದರು. ಅದರಿಂದಾಗಿ ಸೌರಾಷ್ಟ್ರ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 1 ರನ್ ಅಂತರದ ರೋಚಕ ಜಯ ಸಾಧಿಸಿತು. 

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಶ್ವರಾಜ್ ಜಡೇಜ (40; 24ಎ, 4X7) ಮತ್ತು ಸಿದ್ಧಾಂತ್ ರಾಣಾ (42; 27ಎ, 4X3, 6X2) ಅವರ ಆಟದ ಬಲದಿಂದ ಸೌರಾಷ್ಟ್ರ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಕರ್ನಾಟಕದ ವೇಗಿ ವೈಶಾಖ ವಿಜಯಕುಮಾರ್ (28ಕ್ಕೆ3) ಅವರು ಎದುರಾಳಿ ತಂಡವು ಬೃಹತ್ ಮೊತ್ತ ಗಳಿಸದಂತೆ ನಿಯಂತ್ರಿಸಿದರು. 

ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಬಿ.ಆರ್. ಶರತ್ ಖಾತೆ ತೆರೆಯದೇ ಔಟಾದರು. ಜಯದೇವ್ ಉನದ್ಕತ್ ಬೌಲಿಂಗ್‌ನಲ್ಲಿ ಅವರು ಹಾರ್ವಿಕ್ ದೇಸಾಯಿಗೆ ಕ್ಯಾಚಿತ್ತರು. ಮೂರನೇ ಓವರ್‌ನಲ್ಲಿ ಉನದ್ಕತ್ ಎಸೆತದಲ್ಲಯೇ ಪಾರ್ಥ್ ಬುಯ್‌ಗೆ ಕ್ಯಾಚಿತ್ತ ಮೆಕ್ನಿಲ್ ನರೋನಾ ಔಟಾದರು. ಕ್ರೀಸ್‌ಗೆ ಬಂದ ದೇವದತ್ತ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಲು ಪ್ರಯತ್ನಿಸಿದರು. ಅವರು 46 ಎಸೆತಗಳಲ್ಲಿ 66 ರನ್ ಗಳಿಸಿದರು. 9ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಕರುಣ್ ನಾಯರ್ ಕೇವಲ 6 ರನ್ ಗಳಿಸಿ ಔಟಾದರು. ದೇವದತ್ತ ಜೊತೆಗೆ ಸ್ಮರಣ್ (30; 22ಎ, 6X2) ಜೊತೆ ನೀಡಿದರು. ಇಬ್ಬರ ಜೊತೆಯಾಟದಲ್ಲಿ 54 ರನ್ ಸೇರಿದವು. 

ADVERTISEMENT

ಉಳಿದ ಬ್ಯಾಟರ್‌ಗಳಲ್ಲಿ ಶುಭಾಂಗ್ ಹೆಗ್ಡೆ (14 ರನ್), ವಿದ್ಯಾಧರ್ ಪಾಟೀಲ (14 ರನ್) ಹಾಗೂ ವೈಶಾಖ (ಔಟಾಗದೆ 11) ಎರಡಂಕಿ ಸ್ಕೋರ್ ಗಳಿಸಿದರು. ಕೊನೆಯಲ್ಲಿ ವೈಶಾಖ ಹೋರಾಟಕ್ಕೆ ಜಯ ಲಭಿಸಲಿಲ್ಲ. 

ಸಂಕ್ಷಿಪ್ತ ಸ್ಕೋರು:

ಸೌರಾಷ್ಟ್ರ: 20 ಓವರ್‌ಗಳಲ್ಲಿ 8ಕ್ಕೆ178 (ವಿಶ್ವರಾಜ್ ಜಡೇಜ 40, ಹಾರ್ವಿಕ್ ದೇಸಾಯಿ 28, ಸಿದ್ಧಾಂತ್ ರಾಣಾ 42, ಜೈ ಗೋಹಿಲ್ 27, ವೈಶಾಖ ವಿಜಯಕುಮಾರ್ 28ಕ್ಕೆ3)

ಕರ್ನಾಟಕ: 20 ಓವರ್‌ಗಳಲ್ಲಿ 9ಕ್ಕೆ177 (ದೇವದತ್ತ ಪಡಿಕ್ಕಲ್ 66, ಸ್ಮರಣ್ ರವಿಚಂದ್ರನ್ 30, ಜಯದೇವ್ ಉನದ್ಕತ್ 29ಕ್ಕೆ2, ಚೇತನ್ ಸಕಾರಿಯಾ 37ಕ್ಕೆ2, ಪ್ರೇರಕ್ ಮಂಕಡ್ 37ಕ್ಕೆ2)

ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 1 ರನ್ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.