
ಅಹಮದಾಬಾದ್: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಬುಧವಾರ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಕಣಕ್ಕಿಳಿಯಲಿದೆ.
2018–19 ಮತ್ತು 2019–20ರಲ್ಲಿ ಪ್ರಶಸ್ತಿ ಗೆದ್ದಿದ್ದ ಕರ್ನಾಟಕ ತಂಡವು ಮೂರನೇ ಕಿರೀಟದ ಮೇಲೆ ಕಣ್ಣಿಟ್ಟಿದೆ. 2021–22ರಲ್ಲಿ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಮನೀಷ್ ಪಾಂಡೆ ನಾಯಕತ್ವದ ತಂಡವು ಸೋತಿತ್ತು. ಇದೀಗ ಮಯಂಕ್ ಬಳಗವು ಉತ್ತಮ ಲಯದಲ್ಲಿದೆ. ಈಚೆಗಷ್ಟೇ ಮುಗಿದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಹಂತದಲ್ಲಿ ಕರ್ನಾಟಕ ತಂಡವು ಎಲೀಟ್ ಬಿ ಗುಂಪಿನಲ್ಲಿ ಒಟ್ಟು21 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿ, ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಅದರಿಂದಾ ಗಿ ಮಯಂಕ್ ಪಡೆಯು ಅಪಾರ ಆತ್ಮವಿಶ್ವಾಸದಲ್ಲಿದೆ.
ಇಲ್ಲಿ ‘ಡಿ’ ಗುಂಪಿನಲ್ಲಿ ಆಡುತ್ತಿರುವ ಕರ್ನಾಟಕ ತಂಡದಲ್ಲಿ ಉತ್ತಮ ಲಯದಲ್ಲಿರುವ ನಾಯಕ ಮಯಂಕ್, ಅನುಭವಿ ಬ್ಯಾಟರ್ ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಟಿ20 ಪರಿಣತ ಬ್ಯಾಟರ್ ಅಭಿನವ್ ಮನೋಹರ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರ ಮೇಲೆ ಭರವಸೆಯ ಕಂಗಳು ನೆಟ್ಟಿವೆ. ವೇಗದ ಜೋಡಿ ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ ಮತ್ತು ವೈಶಾಖ ವಿಜಯಕುಮಾರ್ ಅವರ ಮೇಲೆ ಬೌಲಿಂಗ್ ವಿಭಾಗದ ಹೊಣೆ ಇದೆ. ಮೆಕ್ನಿಲ್ ಹ್ಯಾಡ್ಲಿ ನರೋನಾ, ಕೆ.ಎಲ್. ಶ್ರೀಜಿತ್ ಅವರು ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಬಹುದು.
ಸ್ಪಿನ್ನರ್ ಶಿಖರ್ ಶೆಟ್ಟಿ, ಶುಭಾಂಗ್ ಹೆಗ್ಡೆ ಅವರು ಶ್ರೇಯಸ್ ಗೋಪಾಲ್ ಜೊತೆಗೂಡುವ ಸಾಧ್ಯತೆ ಇದೆ. ಹೊಸ ಹುಡುಗ, 23 ವರ್ಷದ ಶ್ರೀವತ್ಸ ಆಚಾರ್ಯ ಕಣಕ್ಕಿಳಿಯುವ ಅವಕಾಶ ಪಡೆಯುವರೇ ಎಂಬುದು ಪಂದ್ಯದ ದಿನವೇ ತಿಳಿಯಲಿದೆ.
ಆಕಾಶ್ ಮಧ್ವಾಲ್ ನಾಯಕತ್ವದ ಉತ್ತರಾಖಂಡ ತಂಡದಲ್ಲಿ ಕನ್ನಡಿಗ ಜಗದೀಶ್ ಸುಚಿತ್ ಇದ್ದಾರೆ. ಉಳಿದಂತೆ ಪ್ರಶಾಂತ್ ಚೋಪ್ರಾ, ಅಗ್ನಿವೇಶ್ ಅಯಾಚಿ, ರಾಹುಲ್ ರಾಜ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಪಂದ್ಯ ಆರಂಭ: ಬೆಳಿಗ್ಗೆ 9
ಹಾರ್ದಿಕ್ ಕಣಕ್ಕೆ ಮರಳುವ ಸಾಧ್ಯತೆ
ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ನಂತರ ಹಾರ್ದಿಕ್ ಮತ್ತೆ ಆಟದಂಗಳದಲ್ಲಿ ಕಾಣಿಸಿಕೊಂಡಿಲ್ಲ. ಪಕ್ಕೆಲುಬಿನ ಗಾಯದ ಚಿಕಿತ್ಸೆಗೆ ಅವರು ತೆರಳಿದ್ದರು. ಮುಂದಿನ ಫೆಬ್ರುವರಿಯಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯುವತ್ತ ಅವರು ಚಿತ್ತ ನೆಟ್ಟಿದ್ದಾರೆ.
ಅದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಆಡುವ ಪ್ರಯತ್ನದಲ್ಲಿಯೂ ಅವರಿದ್ದಾರೆ. ಆದ್ದರಿಂದ ತಮ್ಮ ಫಿಟ್‌ನೆಸ್ ಸಾಬೀತುಪಡಿಸಲು ದೇಶಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ. ಅವರು ತಮ್ಮ ಸಹೋದರ ಕೃಣಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡದಲ್ಲಿ ಆಡಲಿದ್ದಾರೆ. ಬುಧವಾರ ನಡೆಯುವ ಪಂದ್ಯದಲ್ಲಿ ಬಂಗಾಳ ಎದುರು ಬರೋಡಾ ಆಡಲಿದೆ. ಈ ಬಾರಿ ಟೂರ್ನಿಯ ಪಂದ್ಯಗಳು ಹೈದರಾಬಾದ್ ಅಹಮದಾಬಾದ್ ಕೋಲ್ಕತ್ತ ಮತ್ತು ಲಖನೌ ನಗರಗಳಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.