ADVERTISEMENT

ರೋಹನ್‌–ಶರತ್‌ ಶತಕದ ಜೊತೆಯಾಟ

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಬಂಗಾಳ ಎದುರು ಕರ್ನಾಟಕ ಜಯಭೇರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 19:28 IST
Last Updated 22 ಫೆಬ್ರುವರಿ 2019, 19:28 IST
ರೋಹನ ಕದಂ
ರೋಹನ ಕದಂ   

ಕಟಕ್‌: ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದ ರೋಹನ್‌ ಕದಂ ಮತ್ತು ಬಿ.ಆರ್‌.ಶರತ್‌, ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಡ್ರೀಮ್ಸ್‌ ಮೈದಾನದಲ್ಲಿ ಶುಕ್ರವಾರ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ಮನೀಷ್‌ ಪಾಂಡೆ ಪಡೆ 9 ವಿಕೆಟ್‌ಗಳಿಂದ ಬಂಗಾಳವನ್ನು ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಬಂಗಾಳ ತಂಡವು ಅಭಿಮನ್ಯು ಮಿಥುನ್‌ (22ಕ್ಕೆ3) ಮತ್ತು ಆರ್‌.ವಿನಯ್‌ ಕುಮಾರ್‌ (18ಕ್ಕೆ2) ಅವರ ವೇಗದ ದಾಳಿಗೆ ತತ್ತರಿಸಿತು. ಮನೋಜ್‌ ತಿವಾರಿ ಬಳಗ 19.4 ಓವರ್‌ಗಳಲ್ಲಿ 131ರನ್‌ಗಳಿಗೆ ಆಲೌಟ್‌ ಆಯಿತು. ಸಾಧಾರಣ ಗುರಿಯನ್ನು ಕರ್ನಾಟಕ 15.5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ADVERTISEMENT

ಬಂಗಾಳ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದ ರೋಹನ್‌ ಮತ್ತು ವಿಕೆಟ್‌ ಕೀಪರ್‌ ಶರತ್‌ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. ಇವರು 87 ಎಸೆತಗಳಲ್ಲಿ 117ರನ್‌ ಗಳಿಸಿ ಮನೀಷ್‌ ಪಡೆಯ ಗೆಲುವಿನ ಹಾದಿ ಸುಗಮ ಮಾಡಿದರು.

37 ಎಸೆತಗಳನ್ನು ಆಡಿದ ಶರತ್‌ 9 ಬೌಂಡರಿ ಸಹಿತ 50ರನ್‌ ಸಿಡಿಸಿ ಪ್ರದಿಪ್ತ ಪ್ರಾಮಾಣಿಕ್‌ಗೆ ವಿಕೆಟ್‌ ನೀಡಿದರು. ಬಳಿಕ ರೋಹನ್‌ ಇನ್ನಷ್ಟು ಆಕ್ರಮಣಕಾರಿಯಾದರು. 55 ಎಸೆತಗಳನ್ನು ಎದುರಿಸಿದ ಅವರು 81 ರನ್‌ ಗಳಿಸಿ ಅಜೇಯವಾಗುಳಿದರು. ಬೌಂಡರಿ (10) ಮತ್ತು ಸಿಕ್ಸರ್‌ಗಳ (2) ಮೂಲಕವೇ 52ರನ್‌ ಗಳಿಸಿದ್ದು ಅವರ ಅಬ್ಬರಕ್ಕೆ ಸಾಕ್ಷಿ. ರೋಹನ್‌ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು!

ಮೂರು ಓವರ್‌ಗಳಲ್ಲಿ 28ರನ್‌ ನೀಡಿ ಒಂದು ವಿಕೆಟ್‌ ಉರುಳಿಸಿದ ಪ್ರಾಮಾಣಿಕ್‌ ಬಂಗಾಳ ತಂಡದ ಯಶಸ್ವಿ ಬೌಲರ್‌ ಎನಿಸಿದರು.

ಉತ್ತಮ ಆರಂಭ: ಬ್ಯಾಟಿಂಗ್ ಆರಂಭಿಸಿದ ಬಂಗಾಳ ತಂಡಕ್ಕೆ ಶ್ರೀವತ್ಸ ಗೋಸ್ವಾಮಿ (40; 29ಎ, 6ಬೌಂ, 1ಸಿ) ಮತ್ತು ವಿವೇಕ್‌ ಸಿಂಗ್‌ (10; 7ಎ, 1ಸಿ) ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 25 ಎಸೆತಗಳಲ್ಲಿ 37ರನ್ ಸೇರಿಸಿದರು.

ಐದನೇ ಓವರ್‌ ಬೌಲ್‌ ಮಾಡಿದ ಮಿಥುನ್‌, ಬಂಗಾಳ ತಂಡಕ್ಕೆ ಮೊದಲ ಆಘಾತ ನೀಡಿದರು. ಅವರು ಮೊದಲ ಎಸೆತದಲ್ಲಿ ವಿವೇಕ್‌ ಸಿಂಗ್‌ ವಿಕೆಟ್‌ ಉರುಳಿಸಿದರು.

ಅಭಿಮನ್ಯು ಈಶ್ವರನ್‌ (16; 12ಎ, 1ಬೌಂ, 1ಸಿ) ಮತ್ತು ನಾಯಕ ಮನೋಜ್‌ (36; 37ಎ, 2ಬೌಂ, 1ಸಿ) ಕೂಡಾ ದಿಟ್ಟ ಆಟ ಆಡಿದ್ದರಿಂದ ತಂಡದ ಗೆಲುವಿನ ಆಸೆ ಚಿಗುರೊಡೆದಿತ್ತು.

ವಿನಯ್‌, ಮಿಥುನ್‌, ಮನೋಜ್‌ ಎಸ್‌.ಭಾಂಡಗೆ ಮತ್ತು ಕೆ.ಸಿ.ಕಾರ್ಯಪ್ಪ ಅವರು ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಸಫಲರಾದರು.

ಸಂಕ್ಷಿಪ್ತ ಸ್ಕೋರ್‌: ಬಂಗಾಳ: 19.4 ಓವರ್‌ಗಳಲ್ಲಿ 131 (ಶ್ರೀವತ್ಸ ಗೋಸ್ವಾಮಿ 40, ವಿವೇಕ್‌ ಸಿಂಗ್‌ 10, ಅಭಿಮನ್ಯು ಈಶ್ವರನ್‌ 16, ಮನೋಜ್‌ ತಿವಾರಿ 36, ರಿತ್ವಿಕ್‌ ಚೌಧರಿ 17; ಆರ್‌.ವಿನಯ್‌ ಕುಮಾರ್‌ 18ಕ್ಕೆ2, ಅಭಿಮನ್ಯು ಮಿಥುನ್‌ 22ಕ್ಕೆ3, ಕೆ.ಸಿ.ಕಾರ್ಯಪ್ಪ 19ಕ್ಕೆ1, ಮನೋಜ್‌ ಎಸ್‌.ಭಾಂಡಗೆ 18ಕ್ಕೆ2).

ಕರ್ನಾಟಕ: 15.5 ಓವರ್‌ಗಳಲ್ಲಿ 1 ವಿಕೆಟ್‌ಗೆ 134 (ರೋಹನ್‌ ಕದಂ ಔಟಾಗದೆ 81, ಬಿ.ಆರ್‌.ಶರತ್‌ 50, ಕರುಣ್‌ ನಾಯರ್‌ ಔಟಾಗದೆ 2; ಪ್ರದಿಪ್ತ ಪ್ರಾಮಾಣಿಕ್‌ 28ಕ್ಕೆ1).

ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.