
ಮಯಂಕ್ ಅಗರವಾಲ್
(ಸಂಗ್ರಹ ಚಿತ್ರ)
ಅಹಮದಾಬಾದ್: ದೆಹಲಿ ತಂಡದ ಎದುರು ಗುರುವಾರ 45 ರನ್‌ಗಳ ಸೋಲನುಭವಿಸುವ ಮೂಲಕ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಸವಾಲು ಲೀಗ್ ಹಂತದಲ್ಲಿಯೇ ಕೊನೆಗೊಂಡಿತು.
ಈ ಹಿಂದಿನ ಪಂದ್ಯದಲ್ಲಿ ತ್ರಿಪುರ ಎದುರು ಆಘಾತಕಾರಿ ಸೋಲನುಭವಿಸಿದ್ದ ದೆಹಲಿ ತಂಡ ಈ ಮಹತ್ವದ ಪಂದ್ಯದಲ್ಲಿ ಅಮೋಘವಾಗಿ ಪುಟಿದೆದ್ದಿತು. 20 ಓವರುಗಳಲ್ಲಿ 3 ವಿಕೆಟ್‌ಗೆ 232 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತು. ಉತ್ತರವಾಗಿ ಕರ್ನಾಟಕ 19.3 ಓವರುಗಳಲ್ಲಿ 187 ರನ್‌ಗಳಿಗೆ ಆಲೌಟಾಯಿತು.
ಕರ್ನಾಟಕ ತಂಡವು (5 ಪಂದ್ಯಗಳಿಂದ 8 ಅಂಕ) ಈ ಸೋಲಿನಿಂದ ಏಳು ತಂಡಗಳಿರುವ ಬಿ ಗುಂಪಿನಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿಯಿತು. ದೆಹಲಿ (5 ಪಂದ್ಯಗಳಿಂದ 12) ಮೂರನೇ ಸ್ಥಾನಕ್ಕೆ ಏರಿ ಕ್ವಾರ್ಟರ್‌ಫೈನಲ್ ಆಸೆ ಜೀವಂತವಾಗಿ ಉಳಿಸಿತು. ಆದರೆ ಅಜೇಯವಾಗಿರುವ ಜಾರ್ಖಂಡ್ ಮತ್ತು ರಾಜಸ್ಥಾನ ತಂಡಗಳು (5 ಪಂದ್ಯಗಳಿಂದ 20 ಅಂಕ) ನಾಕೌಟ್‌ಗೆ ತಲುಪುವ ನೆಚ್ಚಿನ ತಂಡಗಳೆನಿಸಿವೆ.
ಯುವ ಎಡಗೈ ಆಟಗಾರ ಪ್ರಿಯಾಂಶ್ ಆರ್ಯ 33 ಎಸೆತಗಳಲ್ಲಿ 62 ರನ್ (4x2, 6x6) ಸಿಡಿಸುವ ಮೂಲಕ ದೆಹಲಿಗೆ ಭದ್ರ ಬುನಾದಿ ಒದಗಿಸಿದರು. ಆಯುಷ್ ಬಡೋನಿ (53, 35ಎ), ತೇಜಸ್ವಿ ದಹಿಯಾ (ಅಜೇಯ 53, 19ಎ, 4x3, 6x5) ಮತ್ತು ನಿತೀಶ್ ರಾಣಾ (ಅಜೇಯ 46, 28ಎ) ಅವರು ಅದೇ ಲಯದಲ್ಲಿ ಆಡಿ ಬುನಾದಿಯ ಮೇಲೆ ಮಹಲು ಕಟ್ಟಿದರು.
ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ (31ಕ್ಕೆ2) ಮಾತ್ರ ಕರ್ನಾಟಕ ಕಡೆ ಪರಿಣಾಮಕಾರಿಯೆನಿಸಿದರು. ವೈಶಾಖ ವಿಜಯಕುಮಾರ್ (4 ಓವರುಗಳಲ್ಲಿ 61), ಶ್ರೇಯಸ್ ಗೋಪಾಲ್ (2 ಓವರುಗಳಲ್ಲಿ 31) ಸೇರಿ ಉಳಿದವರು ದುಬಾರಿಯಾದರು.
ಈ ದೊಡ್ಡ ಸವಾಲು ಬೆನ್ನಟ್ಟಿದ ಕರ್ನಾಟಕ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಗ್ರ ಆಟಗಾರರಾದ ಮಯಂಕ್ ಅಗರವಾಲ್ (9) ಮತ್ತು ಕರುಣ್ ನಾಯರ್ (2) ಅವರು ವಿಫಲರಾದರು. ದೇವದತ್ತ ಪಡಿಕ್ಕಲ್ (62, 38ಎಸೆತ) ಮತ್ತು ಸ್ಮರಣ್ ಆರ್. (72, 38ಎ) ನಾಲ್ಕನೇ ವಿಕೆಟ್‌ಗೆ 76 ರನ್ ಸೇರಿಸಿದ್ದು ಬಿಟ್ಟರೆ ಇನಿಂಗ್ಸ್‌ನಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇರಲಿಲ್ಲ.
ಭಾರತ ತಂಡದ ಮಾಜಿ ಬೌಲರ್ ಇಶಾಂತ್ ಶರ್ಮಾ (36ಕ್ಕೆ2) ಪ್ರಮುಖ ವಿಕೆಟ್‌ಗಳನ್ನು ಪಡೆದರೆ, ಆಯುಷ್ ಬಡೋನಿ (2–0–12–4) ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟು ನೀಡಿದರು.
ಸಂಕ್ಷಿಪ್ತ ಸ್ಕೋರು:
ದೆಹಲಿ: 20 ಓವರುಗಳಲ್ಲಿ 3ಕ್ಕೆ 232 (ಪ್ರಿಯಾಂಶ್ ಆರ್ಯ 62, ಆಯುಷ್ ಬಡೋನಿ 53, ನಿತೀಶ್ ರಾಣಾ ಔಟಾಗದೇ 46, ತೇಜಸ್ವಿ ದಹಿಯಾ ಔಟಾಗದೇ 53; ಶುಭಾಂಗ್ ಹೆಗ್ಡೆ 31ಕ್ಕೆ2);
ಕರ್ನಾಟಕ: 19.3 ಓವರುಗಳಲ್ಲಿ 187 (ದೇವದತ್ತ ಪಡಿಕ್ಕಲ್ 62, ಸ್ಮರಣ್ ಆರ್. 72; ಇಶಾಂತ್ ಶರ್ಮಾ 36ಕ್ಕೆ2, ಪ್ರಿನ್ಸ್ ಯಾದವ್ 27ಕ್ಕೆ2, ದಿಗ್ವೇಶ್ ರಾಥಿ 30ಕ್ಕೆ2, ಆಯುಷ್ ಬಡೋನಿ 12ಕ್ಕೆ4). ಪಂದ್ಯದ ಆಟಗಾರ: ಆಯುಷ್ ಬಡೋನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.