ADVERTISEMENT

ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ: ಅನುಕೂಲ್‌ ಆಟಕ್ಕೆ ಒಲಿದ ಜಯ

ಕರ್ನಾಟಕಕ್ಕೆ ಸೋಲು

ಪಿಟಿಐ
Published 28 ನವೆಂಬರ್ 2025, 20:23 IST
Last Updated 28 ನವೆಂಬರ್ 2025, 20:23 IST
ಅನುಕೂಲ್‌ ರಾಯ್‌
ಅನುಕೂಲ್‌ ರಾಯ್‌   

ಅಹಮದಾಬಾದ್‌: ಮಧ್ಯಮ ಕ್ರಮಾಂಕದ ಬ್ಯಾಟರ್‌ ಅನುಕೂಲ್ ರಾಯ್ (ಔಟಾಗದೇ 95; 58ಎ) ಅವರ ಏಕಾಂಗಿ ಹೋರಾಟದ ಬಲದಿಂದ ಜಾರ್ಖಂಡ್‌ ತಂಡವು ಶುಕ್ರವಾರ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಕೊನೆಯ ಓವರ್‌ವರೆಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಎಲೀಟ್‌ ಡಿ ಗುಂಪಿನ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆ ಜಾರ್ಖಂಡ್‌ ಜಯಭೇರಿ ಬಾರಿಸಿತು. ಸತತ ಎರಡು ಪಂದ್ಯಗಳನ್ನು ಗೆದ್ದ ಜಾರ್ಖಂಡ್‌ (8 ಅಂಕ) ತಂಡವು ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.  

158 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಜಾರ್ಖಂಡ್‌ ತಂಡವು ಒಂದು ಹಂತದಲ್ಲಿ 60 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಅನುಕೂಲ್ ಅವರು ಛಲಬಿಡದೆ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ಟಾಸ್‌ ಗೆದ್ದ ಜಾರ್ಖಂಡ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡಕ್ಕೆ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ನಾಯಕ ಮಯಂಕ್‌ ಅಗರವಾಲ್‌ (37;28ಎ) ಮತ್ತು ಸ್ಮರಣ್‌ ರವಿಚಂದ್ರನ್‌ (32;29ಎ) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಎದುರಾಳಿ ತಂಡದ ಸುಶಾಂತ್‌ ಮಿಶ್ರಾ ಮೂರು ವಿಕೆಟ್‌ ಪಡೆದರೆ, ಸೌರಭ್‌ ಶೇಖರ್‌ ಮತ್ತು ಅನುಕೂಲ್‌ ರಾಯ್‌ ತಲಾ ಎರಡು ವಿಕೆಟ್‌ ಪಡೆದರು. 

ಜಾರ್ಖಂಡ್‌ ತಂಡಕ್ಕೆ ಆರಂಭದಲ್ಲೇ ವಿದ್ಯಾಧರ ಪಾಟೀಲ್‌ (45ಕ್ಕೆ 3) ಪೆಟ್ಟು ನೀಡಿದರು. 38 ರನ್‌ ಗಳಿಸುವಷ್ಟರಲ್ಲಿ ಆರಂಭದ ಮೂರು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿಕೊಂಡಿದ್ದರು. ಆದರೆ, ಈ ಹಂತದಲ್ಲಿ ಕ್ರೀಸ್‌ಗೆ ಬಂದ ಅನುಕೂಲ್‌ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಅವರ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್‌, ಒಂಬತ್ತು ಬೌಂಡರಿಗಳಿದ್ದವು.  

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 (ಮಯಂಕ್‌ ಅಗರವಾಲ್‌ 37, ಆರ್‌.ಸ್ಮರಣ್‌ 32; ಅನುಕೂಲ್‌ ರಾಯ್‌ 13ಕ್ಕೆ 2, ಸುಶಾಂತ್ ಮಿಶ್ರಾ 39ಕ್ಕೆ 3); ಜಾರ್ಖಂಡ್‌: 19.4 ಓವರ್‌ಗಳಲ್ಲಿ 8 ವಿಕೆಟ್‌ಗೆ 158 (ಅನುಕೂಲ್‌ ರಾಯ್‌ ಔಟಾಗದೇ 95; ವಿದ್ಯಾಧರ ಪಾಟೀಲ 45ಕ್ಕೆ 3). ಫಲಿತಾಂಶ: ಜಾರ್ಖಂಡ್‌ಗೆ 2 ವಿಕೆಟ್‌ಗಳ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.