ADVERTISEMENT

ಟಿ–20 ರ‍್ಯಾಂಕಿಂಗ್‌: 8ನೇ ಸ್ಥಾನದಲ್ಲಿ ರೋಹಿತ್‌ ಶರ್ಮಾ

11ನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ

ಪಿಟಿಐ
Published 25 ಸೆಪ್ಟೆಂಬರ್ 2019, 14:10 IST
Last Updated 25 ಸೆಪ್ಟೆಂಬರ್ 2019, 14:10 IST
ರೋಹಿತ್‌ ಶರ್ಮಾ (ಸಂಗ್ರಹ ಚಿತ್ರ)
ರೋಹಿತ್‌ ಶರ್ಮಾ (ಸಂಗ್ರಹ ಚಿತ್ರ)   

ದುಬೈ: ಆರಂಭ ಆಟಗಾರ ರೋಹಿತ್‌ ಶರ್ಮಾ, ವಿಶ್ವ ಟ್ವೆಂಟಿ 20 ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎಂಟನೇ ಸ್ಥಾನಕ್ಕೇರಿದ್ದಾರೆ. ಬುಧವಾರ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ, ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ‘ಅಗ್ರ ಹತ್ತರ’ ಸನಿಹದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಅಜೇಯ 72 ರನ್‌ ಬಾರಿಸಿದ್ದ ಭಾರತ ತಂಡದ ನಾಯಕ ಕೊಹ್ಲಿ ಈಗ 11ನೇ ಸ್ಥಾನದಲ್ಲಿದ್ದಾರೆ. ಸರಣಿಯಲ್ಲಿ ಕ್ರಮವಾಗಿ 40 ಮತ್ತು 36 ರನ್‌ ಗಳಿಸಿದ್ದ ಆರಂಭ ಆಟಗಾರ ಧವನ್‌ 13ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ರೋಹಿತ್‌ ಜೊತೆ ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌ ಕೂಡ ಎಂಟನೇ ಸ್ಥಾನದಲ್ಲಿದ್ದಾರೆ. ಇಬ್ಬರೂ 664 ಅಂಕ ಗಳಿಸಿದ್ದಾರೆ.

ADVERTISEMENT

ಬೌಲರ್‌ಗಳ ಪಟ್ಟಿಯಲ್ಲಿ ವಾಷಿಂಗ್ಟನ್‌ ಸುಂದರ್‌ ಎಂಟು ಸ್ಥಾನಗಳಷ್ಟು ಬಡ್ತಿ ಪಡೆದರೂ 50ನೇ ಸ್ಥಾನದಲ್ಲಿದ್ದಾರೆ.

ಅಫ್ಗಾನಿಸ್ತಾನದ ಹಜರತ್‌ಉಲ್ಲಾ ಝಝೈ ಮತ್ತು ಸ್ಕಾಟ್ಲೆಂಡ್‌ನ ಬ್ಯಾಟ್ಸ್‌ಮನ್‌ ಜಾರ್ಜ್‌ ಮುನ್ಸೆ ತಮ್ಮ ರಾಷ್ಟ್ರಗಳ ಪರ ಅತ್ಯುತ್ತಮ ಸಾಧನೆಯಿಂದ ರ‍್ಯಾಂಕಿಂಗ್‌ನಲ್ಲಿ ಮೇಲೇರಿದ್ದಾರೆ. ಐದನೇ ಸ್ಥಾನದಲ್ಲಿದರುವ ಝಝೈ 727 ಅಂಕಗಳನ್ನು ಪಡೆದಿದ್ದಾರೆ. ಇದು ಅಫ್ಗನ್‌ ಬೌಲರ್‌ ಒಬ್ಬರ ಅತ್ಯುತ್ತಮ ಸಾಧನೆ. ಮುನ್ಸೆ 21ನೇ ಸ್ಥಾನದಲ್ಲಿದ್ದಾರೆ. ಅವರು 600 ಪಾಯಿಂಟ್‌ಗಳ ಗಡಿದಾಟಿದ ಮೊದಲ ಸ್ಕಾಟ್ಲೆಂಡ್‌ ಆಟಗಾರ ಎನಿಸಿದ್ದಾರೆ. ಅವರು ದಿ ನೆದರ್ಲೆಂಡ್ಸ್ ಎದುರು ಬರೇ 56 ಎಸೆತಗಳಲ್ಲಿ 127 ರನ್‌ ಬಾರಿಸಿದ್ದರು.

ಜಿಗಿತ ಕಂಡ ಇನ್ನೊಬ್ಬರೆಂದರೆ ದಕ್ಷಿಣ ಆಫ್ರಿಕದ ಕ್ವಿಂಟನ್‌ ಡಿಕಾಕ್‌. ದಕ್ಷಿಣ ಆಫ್ರಿಕದ ಕೀಪರ್‌ 49ನೇ ಸ್ಥಾನದಿಂದ 30ನೇ ಸ್ಥಾನಕ್ಕೆ ಏರಿದ್ದಾರೆ. ಅವರು ಭಾರತ ವಿರುದ್ಧ 52 ಮತ್ತು ಅಜೇಯ 79 ರನ್‌ ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.