ADVERTISEMENT

ಅಂಧ ಮಹಿಳೆಯರ ಟಿ20 ಕ್ರಿಕೆಟ್‌: ಕರ್ನಾಟಕ ತಂಡ ರನ್ನರ್ಸ್‌ ಅಪ್

ಒಡಿಶಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 13:37 IST
Last Updated 13 ಜನವರಿ 2023, 13:37 IST
ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆದ ಕರ್ನಾಟಕ ತಂಡ
ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆದ ಕರ್ನಾಟಕ ತಂಡ   

ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ನಡೆದ ಇಂಡಸ್‌ ಇಂಡ್‌ ಬ್ಯಾಂಕ್‌ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಸೋತು ‘ರನ್ನರ್ಸ್‌ ಅಪ್‌’ ಆದರು.

ಶುಕ್ರವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಒಡಿಶಾ ಚಾಂಪಿಯನ್‌ ಆಯಿತು. ಟೂರ್ನಿಯ ಉದ್ದಕ್ಕೂ ಉತ್ತಮವಾಗಿ ಆಡಿದ್ದ ಆತಿಥೇಯ ಮಹಿಳೆಯರು ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 16.3 ಓವರ್‌ಗಳಲ್ಲಿ 80 ರನ್‌ಗಳಿಗೆ ಆಲೌಟಾಯಿತು. ಒಡಿಶಾ ತಂಡ 12.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 81 ರನ್‌ ಗಳಿಸಿ ಗೆದ್ದಿತು. ಅಜೇಯ ಆಟವಾಡಿದ ಫುಲಾ ಸೊರೇನ್‌ (34) ಮತ್ತು ಬಸಂತಿ ಹನ್ಸ್‌ದಾ (25) ಅವರು ಒಡಿಶಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ADVERTISEMENT

ಇದಕ್ಕೂ ಮುನ್ನ ಕಳೆದ ಬಾರಿಯ ಚಾಂಪಿಯನ್‌ ಕರ್ನಾಟಕ ತಂಡ ಬ್ಯಾಟಿಂಗ್‌ನಲ್ಲಿ ಪೂರ್ಣ ವೈಫಲ್ಯ ಅನುಭವಿಸಿತು. ಒಡಿಶಾ ತಂಡ ಅತ್ಯುತ್ತಮ ಕ್ಷೇತ್ರರಕ್ಷಣೆ ಮೂಲಕ ಕೆಲವು ರನೌಟ್‌ಗಳನ್ನು ಮಾಡಿತು. ಆತಿಥೇಯ ತಂಡದ ವರ್ಷಾ (18) ಮತ್ತು ರೇಣುಕಾ (12) ಮಾತ್ರ ಎರಡಂಕಿಯ ಮೊತ್ತ ತಲುಪಿದರು.

ಬಸಂತಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದುಕೊಂಡರೆ, ಕರ್ನಾಟಕದ ವರ್ಷಾ, ಗಂಗಾ ಹಾಗೂ ಮಧ್ಯಪ್ರದೇಶದ ಸುಶಾಮಾ ಪಟೇಲ್‌ ಅವರು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಆಟಗಾರ್ತಿ ಗೌರವ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 16.3 ಓವರ್‌ಗಳಲ್ಲಿ 80 (ವರ್ಷಾ 18, ರೇಣುಕಾ 12, ಪಾರ್ವತಿ ಟುಡು 22ಕ್ಕೆ 2, ಪಾರ್ವತಿ ಮಾರಂಡಿ 10ಕ್ಕೆ 2).

ಒಡಿಶಾ: 12.2 ಓವರ್‌ಗಳಲ್ಲಿ 2 ವಿಕೆಟ್‌ ಗೆ 81 (ಫುಲಾ ಸೊರೇನ್‌ ಔಟಾಗದೆ 34, ಬಸಂತಿ ಔಟಾಗದೆ 25) ಫಲಿತಾಂಶ: ಒಡಿಶಾ ತಂಡಕ್ಕೆ 8 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.