ADVERTISEMENT

ಸತತ ಏಳು ಸೋಲು ಕಂಡ ಮುಂಬೈ; ಬ್ಯಾಟಿಂಗ್ ದಿಗ್ಗಜ ಸಚಿನ್ ಮಹತ್ವದ ಸಲಹೆ

ಪಿಟಿಐ
Published 22 ಏಪ್ರಿಲ್ 2022, 13:58 IST
Last Updated 22 ಏಪ್ರಿಲ್ 2022, 13:58 IST
   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆಯ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈ ಬಾರಿ ಸತತ ಏಳು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ.

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಟೂರ್ನಿ ಆರಂಭದ ಮೊದಲ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಮೊದಲ ತಂಡವೆಂಬ ಮುಖಭಂಗಕ್ಕೆ ಒಳಗಾಗಿದೆ.

ಈ ನಡುವೆ ಸತತ ಸೋಲು ಕಂಡ ಮುಂಬೈಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಹತ್ವದ ಸಲಹೆ ನೀಡಿದ್ದಾರೆ. 'ಟ್ವೆಂಟಿ-20 ಕ್ರಿಕೆಟ್ ಅತ್ಯಂತ ಕ್ರೂರವಾದ ಮಾದರಿಯಾಗಿರಬಹುದು. ಆದರೆ ನಿರ್ಣಾಯಕ ಘಟ್ಟಗಳಲ್ಲಿ ಮೇಲುಗೈ ಸಾಧಿಸುವುದು ಅತಿ ಮುಖ್ಯ' ಎಂದು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮ್ಯಾಥ್ಯೂ ಹೇಡನ್ ಜೊತೆ ಮಾತನಾಡಿದ ಸಚಿನ್, 'ಈ ಮಾದರಿಯು ಕ್ರೂರವಾಗಿರಬಹುದು. ನಿರ್ಣಾಯಕ ಕ್ಷಣಗಳು ನಿಮ್ಮ ಪರವಾಗಿ ಹೋಗದಿದ್ದರೆ ಎರಡು ಅಥವಾ ಮೂರು ರನ್‌ಗಳಿಂದ ಅಥವಾ ಕೆಲವೊಮ್ಮೆ ಕೊನೆಯ ಎಸೆತದಲ್ಲಿ ಪಂದ್ಯವನ್ನು ಕಳೆದುಕೊಳ್ಳಬಹುದು. ಹಾಗಾಗಿ ನಿರ್ಣಾಯಕ ಹಂತಗಳಲ್ಲಿ ಮೇಲುಗೈ ಸಾಧಿಸುವುದು ಅತಿ ಮುಖ್ಯ. ಆದರೆ ನಮ್ಮಿಂದ ಅದು ಸಾಧ್ಯವಾಗಲಿಲ್ಲ' ಎಂದು ಹೇಳಿದರು.

ಇವೆಲ್ಲದರ ಹೊರತಾಗಿಯೂ ತಂಡದೆಲ್ಲ ಆಟಗಾರರು ಕಠಿಣ ಪರಿಶ್ರಮ ವಹಿಸುತ್ತಿದ್ದಾರೆ ಎಂದು ಮುಂಬೈ ತಂಡದ ಮಾರ್ಗದರ್ಶಕರಾಗಿರುವ ಸಚಿನ್ ಹೇಳಿದರು.

'ಇದು ಹೊಸ ಹಾಗೂ ಯುವ ತಂಡವಾಗಿದೆ. ತಂಡ ಲಯ ಕಂಡುಕೊಳ್ಳಲು ಇನ್ನೂ ಸ್ವಲ್ಪ ಸಮಯ ತಗಲಬಹುದು. ಆದರೆ ಒಂದು ತಂಡವಾಗಿ ಇದ್ದುಕೊಂಡು ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.