ಮುಂಬೈ: ಶ್ರೇಯಸ್ ಅಯ್ಯರ್ ನಾಯಕತ್ವದ ಸೋಬೋ ಮುಂಬೈ ಫಾಲ್ಕನ್ಸ್ ತಂಡವು 'ಟಿ20 ಮುಂಬೈ ಲೀಗ್' ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಸೌತ್ ಸೆಂಟ್ರಲ್ ಮರಾಠ ರಾಯಲ್ಸ್ ತಂಡದ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಫಾಲ್ಕನ್ಸ್, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 157 ರನ್ ಗಳಿಸಿತ್ತು. ಈ ಗುರಿಯನ್ನು ರಾಯಲ್ಸ್ ಪಡೆ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ತಲುಪಿ ಚಾಂಪಿಯನ್ ಪಟ್ಟಕ್ಕೇರಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಫಾಲ್ಕನ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 11.5 ಓವರ್‌ಗಳಲ್ಲಿ 72 ರನ್ ಆಗಿದ್ದಾಗಲೇ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು.
ಅಂಗ್‌ಕ್ರಿಷ್ ರಘುವಂಶಿ (7 ರನ್), ಇಶಾನ್ ಎಂ. (20 ರನ್) ಹಾಗೂ ಅಮೋಘ ಭಟ್ಕಲ್ (16 ರನ್) ಗಳಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಆಟ ಕೇವಲ 12 ರನ್‌ಗೆ ಅಂತ್ಯವಾಯಿತು. ಈ ಹಂತದಲ್ಲಿ ಜೊತೆಯಾದ ಮಯೂರೇಷ್ ತಂಡೆಲ್ ಮತ್ತು ಹರ್ಷ್ ಅಘವ್ ತಂಡಕ್ಕೆ ಆಸರೆಯಾದರು.
ತಂಡೆಲ್ 32 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರೆ, ಅಘವ್ 28 ಎಸೆತಗಳಲ್ಲಿ ಅಜೇಯ 45 ರನ್ ಬಾರಿಸಿದರು. ಹೀಗಾಗಿ, ತಂಡದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು.
ಗುರಿ ಬೆನ್ನತ್ತಿದ ರಾಯಲ್ಸ್ ಪರ ಚಿನ್ಮಯಿ ರಾಜೇಶ್ ಸುತಾರ್ 53 ರನ್ ಹಾಗೂ ಅವೈಸ್ ಖಾನ್ ನೌಶಾದ್ 38 ರನ್ ಗಳಿಸಿದರು. ಹೀಗಾಗಿ, ಸಿದ್ದೇಶ್ ಲಾಡ್ ನಾಯಕತ್ವದ ತಂಡ ಕೇವಲ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ ಜಯದ ನಗೆ ಬೀರಿತು.
ಫೈನಲ್‌ನಲ್ಲಿ ಸತತ ಎರಡನೇ ಸೋಲು
ಶ್ರೇಯಸ್ ಅಯ್ಯರ್ ನಾಯಕತ್ವದ ತಂಡಕ್ಕೆ ಸತತ ಎರಡನೇ ಫೈನಲ್‌ನಲ್ಲಿ ಎದುರಾದ ಸೋಲು ಇದು.
ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಶ್ರೇಯಸ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು.
ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ಅಯ್ಯರ್ ಪಡೆ, ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.