ADVERTISEMENT

T20 WC: ಮುಗ್ಗರಿಸಿದ ಬಾಂಗ್ಲಾ; ಇಂಗ್ಲೆಂಡ್‌ಗೆ ಸತತ 2ನೇ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 13:13 IST
Last Updated 27 ಅಕ್ಟೋಬರ್ 2021, 13:13 IST
ಜೇಸನ್ ರಾಯ್ ಆಟದ ಭಂಗಿ
ಜೇಸನ್ ರಾಯ್ ಆಟದ ಭಂಗಿ   

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ಅಬುಧಾಬಿಯಲ್ಲಿ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಸತತ ಎರಡನೇ ಗೆಲುವು ದಾಖಲಿಸಿರುವ ಇಂಗ್ಲೆಂಡ್, ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅತ್ತ ಬಾಂಗ್ಲಾದೇಶ ಎರಡೂ ಪಂದ್ಯಗಳಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ, ಆಂಗ್ಲರ ಪಡೆಯ ಸಾಂಘಿಕ ದಾಳಿಗೆ ಸಿಲುಕಿ ಒಂಬತ್ತು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ಸಾಧಾರಣ ಮೊತ್ತ ಬೆನ್ನತ್ತಿದ ಇಂಗ್ಲೆಂಡ್, ಜೇಸನ್ ರಾಯ್ ಬಿರುಸಿನ ಅರ್ಧಶತಕದ (61) ನೆರವಿನಿಂದ 14.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಅಮೋಘ ಆಟದ ಪ್ರದರ್ಶನ ನೀಡಿದ ಜೇಸನ್ ರಾಯ್, 38 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು.

ಜೇಸನ್‌ಗೆ ತಕ್ಕ ಸಾಥ್ ನೀಡಿದ ಜೋಸ್ ಬಟ್ಲರ್ (18) ಹಾಗೂ ಡೇವಿಡ್ ಮಲಾನ್ (28*) ರನ್ ಗಳಿಸಿದರು.

ಈ ಮೊದಲು ಬಾಂಗ್ಲಾದೇಶ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಲಿಟನ್ ದಾಸ್ (9), ಮೊಹಮ್ಮದ್ ನೈಮ್ (5) ಹಾಗೂ ಶಕೀಬ್ ಅಲ್ ಹಸನ್ (4) ಎರಡಂಕಿಯನ್ನು ತಲುಪಲಿಲ್ಲ.

ಅನುಭವಿ ಮುಷ್ಫಿಕುರ್ ರಹೀಂ (29) ಹಾಗೂ ನಾಯಕ ಮೆಹಮುದುಲ್ಲಾ (19) ಭರವಸೆ ಮೂಡಿಸಿದರೂ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.

ಕೆಳ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ನೂರುಲ್ ಹಸನ್ (16), ಮೆಹದಿ ಹಸನ್ (11) ಹಾಗೂ ನಸುಮ್ ಅಹಮ್ಮದ್ (19*) ಉಪಯುಕ್ತ ಇನ್ನಿಂಗ್ಸ್‌ ಮೂಲಕತಂಡವು 120ರ ಗಡಿ ದಾಟುವಲ್ಲಿ ನೆರವಾದರು. ಇನ್ನುಳಿದಂತೆ ಅಫಿಫ್ ಹುಸೇನ್(5) ರನೌಟ್ ಆಗಿ ನಿರಾಸೆ ಮೂಡಿಸಿದರು.

ಇಂಗ್ಲೆಂಡ್ ಪರ ಟೈಮಲ್ ಮಿಲ್ಸ್ ಮೂರು ಮತ್ತು ಮೊಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಎರಡು ವಿಕೆಟ್‌‌ಗಳನ್ನು ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.