
ಭರ್ಜರಿ ಹೊಡೆತ ಆಡಿದ ಶೆರ್ಫೇನ್ ರುದರ್‌ಫೋರ್ಡ್
ಪಿಟಿಐ ಚಿತ್ರ
ಮುಂಬೈ: ಶೆರ್ಫೇನ್ ರುದರ್‌ಫೋರ್ಡ್ ಅವರ ಆಕ್ರಮಣಕಾರಿ ಅರ್ಧಶತಕದ ಬಳಿಕ ಗುಡಕೇಶ್ ಮೋತಿ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಟಿ20 ವಿಶ್ವಕಪ್ ‘ಸಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 30 ರನ್‌ಗಳಿಂದ ಮಣಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶೆರ್ಫೇನ್ (76;42ಎ, 4x2, 6x7) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 196 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಹೋರಾಟ ಮುಗಿಸಿತು. ಇದರೊಂದಿಗೆ ವಿಂಡೀಸ್ ಸತತ ಎರಡನೇ ಗೆಲುವು ದಾಖಲಿಸಿತು.
ಸ್ಪಿನ್ನರ್‌ಗಳಾದ ಗುಡಕೇಶ್ (33ಕ್ಕೆ 3) ಮತ್ತು ರೋಸ್ಟನ್ ಚೇಸ್ (29ಕ್ಕೆ 2) ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಲು ನೆರವಾದರು. ಫಿಲ್ ಸಾಲ್ಟ್ (30), ಜೇಕಬ್ ಬೆಥಲ್ (33) ಮತ್ತು ಸ್ಯಾಮ್ ಕರನ್ (ಔಟಾಗದೇ 43) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿಂಡೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಎಂಟು ರನ್‌ಗಳಾಗುವಷ್ಟರಲ್ಲಿ ಆರಂಭ ಆಟಗಾರರಾದ ಶಾಯ್ ಹೋಪ್ (0) ಮತ್ತು ಬ್ರಾಂಡನ್ ಕಿಂಗ್ (1) ಪೆವಿಲಿಯನ್ ಸೇರಿದ್ದರು. ಮೊದಲ 10 ಓವರುಗಳ ನಂತರ 4 ವಿಕೆಟ್‌ಗೆ 79 ರನ್ ಗಳಿಸಿತ್ತು.
ಈ ಹಂತದಲ್ಲಿ ಎಡಗೈ ಬ್ಯಾಟರ್ ಶೆರ್ಫೇನ್ ನೆರವಿಗೆ ಬಂದು ತಂಡಕ್ಕೆ ಆಸರೆಯಾದರು. ಐದನೇ ವಿಕೆಟ್‌ಗೆ ರೋವ್ಮನ್ ಪಾವೆಲ್ (14) ಜೊತೆ 51 ರನ್ ಸೇರಿಸಿದರು. ನಂತರ, ಮಾಜಿ ನಾಯಕ ಜೇಸನ್ ಹೋಲ್ಡರ್ (33;17ಎ) ಜೊತೆ ಕೇವಲ 32 ಎಸೆತಗಳಲ್ಲಿ 61 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಸನಿಹ ತಲುಪಿಸಿದರು. ಕೊನೆಯ 10 ಓವರುಗಳಲ್ಲಿ 117 ರನ್‌ಗಳು ಹರಿದುಬಂದವು.
ನೇಪಾಳ ವಿರುದ್ಧ ಕೈಸುಟ್ಟುಕೊಂಡಿದ್ದ ಅದಿಲ್ ರಶೀದ್ (4–0–16–2) ಇಲ್ಲಿ ಮಿತವ್ಯಯಿಯಾಗಿದ್ದು, 16 ರನ್ನಿಗೆ 2 ವಿಕೆಟ್ ಪಡೆದರು. ಟಿ20 ಮಾದರಿಯಲ್ಲಿ ಒಟ್ಟು 400 ವಿಕೆಟ್ ಸಹ ಪೂರೈಸಿದರು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 6ಕ್ಕೆ 196 (ಹೆಟ್ಮೇಯರ್ 23, ರೋಸ್ಟನ್ ಚೇಸ್ 34, ಶೆರ್ಫೇನ್ ರುದರ್‌ಫೋರ್ಡ್ ಔಟಾಗದೇ 76, ಜೇಸನ್ ಹೋಲ್ಡರ್ 33; ಜೇಮಿ ಓವರ್ಟನ್ 33ಕ್ಕೆ2, ಅದಿಲ್ ರಶೀದ್ 16ಕ್ಕೆ2); ಇಂಗ್ಲೆಂಡ್: 19 ಓವರುಗಳಲ್ಲಿ 166 (ಫಿಲ್ ಸಾಲ್ಟ್ 30, ಜೇಕಬ್ ಬೆಥೆಲ್ 33, ಸ್ಯಾಮ್ ಕರನ್ ಔಟಾಗದೇ 43; ರೋಸ್ಟನ್ ಚೇಸ್ 29ಕ್ಕೆ2, ಗುಡಕೇಶ್ ಮೋತಿ 33ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.