ADVERTISEMENT

ಟ್ವೆಂಟಿ–20 ವಿಶ್ವಕಪ್‌: ಆಸ್ಟ್ರೇಲಿಯಾಗೆ ಪ್ರಮುಖರ ವೈಫಲ್ಯದ ಆತಂಕ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ; ಫಿಂಚ್ ಬಳಗಕ್ಕೆ ಸಮರ್ಪಕ ಅಭ್ಯಾಸದ ಕೊರತೆ

ಪಿಟಿಐ
Published 22 ಅಕ್ಟೋಬರ್ 2021, 14:25 IST
Last Updated 22 ಅಕ್ಟೋಬರ್ 2021, 14:25 IST
ಆ್ಯರನ್ ಫಿಂಚ್ –ಪಿಟಿಐ ಚಿತ್ರ
ಆ್ಯರನ್ ಫಿಂಚ್ –ಪಿಟಿಐ ಚಿತ್ರ   

ಅಬುಧಾಬಿ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದ ಆತಂಕ ಎದುರಿಸುತ್ತಿರುವ ಆಸ್ಟ್ರೇಲಿಯಾ ತಂಡ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಸೂಪರ್ 12 ಹಂತದ ಒಂದನೇ ಗುಂಪಿನ ಮೊದಲ ಪಂದ್ಯದಲ್ಲಿ ಶನಿವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಪ್ರಶಸ್ತಿಯ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯುತ್ತಿರುವ ಆಸ್ಟ್ರೇಲಿಯಾ ಈಚೆಗೆ ಬಾಂಗ್ಲಾದೇಶ, ವೆಸ್ಟ್ ಇಂಡೀಸ್‌, ನ್ಯೂಜಿಲೆಂಡ್‌, ಭಾರತ ಮತ್ತು ಇಂಗ್ಲೆಂಡ್ ಎದುರು ನಡೆದ ಸರಣಿಗಳಲ್ಲಿ ಸೋತಿತ್ತು. ಈ ಸರಣಿಗಳಲ್ಲಿ ಪ್ರಮುಖರಾದ ಅನೇಕ ಆಟಗಾರರು ಲಭ್ಯ ಇರಲಿಲ್ಲ. ಹೀಗಾಗಿ ಒಟ್ಟು 18 ಪಂದ್ಯಗಳ ಪೈಕಿ 13ರಲ್ಲಿ ತಂಡ ಸೋತಿತ್ತು.

ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಫಾರ್ಮ್‌ನಲ್ಲಿ ಇಲ್ಲದೇ ಇರುವುದು ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಐಪಿಎಲ್‌ನಲ್ಲಿ ನೀರಸ ಆಟವಾಡಿದ್ದ ಅವರನ್ನು ರಾಷ್ಟ್ರೀಯ ತಂಡದಿಂದ ಎರಡು ಬಾರಿ ಕೈಬಿಡಲಾಗಿತ್ತು. ವಿಶ್ವಕಪ್‌ನ ಎರಡು ಅಭ್ಯಾಸ ಪಂದ್ಯಗಳಲ್ಲಿ 0 ಮತ್ತು 1 ರನ್ ಗಳಿಸಿದ್ದರು. ನಾಯಕ ಆ್ಯರನ್ ಫಿಂಚ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಕಳೆದು ಬಂದಿದ್ದಾರೆ. ಉಪನಾಯಕ ಪ್ಯಾಟ್ ಕಮಿನ್ಸ್‌ ಐಪಿಎಲ್‌ನ ಮೊದಲ ಹಂತದ ಪಂದ್ಯದ ನಂತರ ಆಡಲಿಲ್ಲ.

ADVERTISEMENT

ಸ್ಟೀವ್ ಸ್ಮಿತ್‌, ಮಾರ್ಕಸ್ ಸ್ಟೋಯಿನಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಿಷೆಲ್ ಮಾರ್ಷ್‌, ಆ್ಯಷ್ಟನ್ ಅಗರ್‌, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್‌ ಮತ್ತು ಕೇನ್ ರಿಚರ್ಡ್ಸನ್‌ ಮೇಲೆ ತಂಡ ನಿರೀಕ್ಷೆ ಇರಿಸಿಕೊಂಡಿದೆ.

ಐರ್ಲೆಂಡ್‌, ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಎದುರು ಈಚೆಗೆ ನಡೆದ ಸರಣಿಗಳಲ್ಲಿ ಅಮೋಘ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ಭರವಸೆಯಲ್ಲಿದೆ. ಆದರೆ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲು ಆಗದೇ ಇರುವ ಅಂಶ ತಂಡವನ್ನು ಕಾಡುತ್ತಿದ್ದು ಅದರಿಂದ ಹೊರಬರಲು ಪ್ರಯತ್ನಿಸಲಿದೆ.

ತಂಡಗಳು: ಆಸ್ಟ್ರೇಲಿಯಾ: ಆ್ಯರನ್ ಫಿಂಚ್‌ (ನಾಯಕ), ಆ್ಯಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ಉಪನಾಯಕ), ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್‌, ಮಿಷೆಲ್ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೇನ್‌ ರಿಚರ್ಡ್ಸನ್‌, ಸ್ಟೀವ್ ಸ್ಮಿತ್‌, ಮಿಷೆಲ್ ಸ್ಟಾರ್ಕ್‌, ಮಾರ್ಕಸ್ ಸ್ಟೋಯಿನಿಸ್‌, ಮಿಷೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್‌, ಡೇವಿಡ್ ವಾರ್ನರ್‌, ಆ್ಯಡಂ ಜಂಪಾ.

ದಕ್ಷಿಣ ಆಫ್ರಿಕಾ: ತೆಂಬಾ ಬವುಮ (ನಾಯಕ), ಕೇಶವ್‌ ಮಹಾರಾಜ್‌, ಕ್ವಿಂಟನ್ ಡಿ ಕಾಕ್‌ (ವಿಕೆಟ್ ಕೀಪರ್‌), ಜಾನ್ ಫಾರ್ಟ್ಯೂನ್‌, ರೀಜಾ ಹೆಂಡ್ರಿಕ್ಸ್‌, ಹೆನ್ರಿಕ್‌ ಕ್ಲಾಸೆನ್‌, ಏಡನ್ ಮರ್ಕರಮ್‌, ಡೇವಿಡ್‌ ಮಿಲ್ಲರ್‌, ಡಬ್ಜ್ಯು ಮಲ್ಡರ್‌, ಲುಂಗಿ ಗಿಡಿ, ಆ್ಯನ್ರಿಚ್ ನಾರ್ಕಿಯ, ಡ್ವೇನ್ ಪ್ರಿಟೋರಿಯಸ್‌, ಕಗಿಸೊ ರಬಾಡ, ತಬ್ರೇಜ್‌ ಶಂಸಿ, ರಸ್ಸಿ ವ್ಯಾನ್ ಡೆರ್‌ ಡುಸೆನ್‌.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.