ನವದೆಹಲಿ: ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಮುಂದಿನ ವರ್ಷದ ಫೆಬ್ರುವರಿ 7ರಿಂದ ಮಾರ್ಚ್ 8ರವರೆಗೆ ನಡೆಯುವ ಸಾಧ್ಯತೆಯಿದೆ. ಇದಕ್ಕಾಗಿ ಭಾರತದ ಕನಿಷ್ಠ ಐದು ಮತ್ತು ಶ್ರೀಲಂಕಾದ ಎರಡು ತಾಣಗಳನ್ನು ಗುರುತಿಸಲಾಗಿದೆ.
ಫೈನಲ್ ಪಂದ್ಯಕ್ಕೆ ಅಹಮದಾಬಾದ್ ಅಥವಾ ಕೊಲಂಬೊ ಕ್ರೀಡಾಂಗಣವನ್ನು ಗುರುತಿಸಲಾಗಿದೆ. ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿದರೆ ಮಾತ್ರ ಆ ಪಂದ್ಯವು ಕೊಲಂಬೊದಲ್ಲಿ ನಡೆಯಲಿದೆ. ಐಸಿಸಿ ಮತ್ತು ಬಿಸಿಸಿಐ ಮಾಡಿಕೊಂಡ ಒಪ್ಪಂದದ ಭಾಗವಾಗಿ ಪಾಕ್ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಪೂರ್ಣ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿ ಮಾಡಿದೆ.
2024ರ ಆವೃತ್ತಿಯ ಸ್ವರೂಪದಲ್ಲೇ ಈ ಬಾರಿಯೂ ಟೂರ್ನಿ ನಡೆಯಲಿದೆ. 20 ತಂಡಗಳನ್ನು ತಲಾ ಐದರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ನಂತರ ಸೂಪರ್ ಎಂಟು ಹಂತ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯುತ್ತವೆ.
ಈಗಾಗಲೇ ಅರ್ಹತೆ ಪಡೆದ 15 ತಂಡಗಳ ಪೈಕಿ ಇಟಲಿ ಇದೇ ಮೊದಲ ಬಾರಿ ಸ್ಪರ್ಧಿಸುತ್ತಿದೆ. ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ನೆದರ್ಲೆಂಡ್ಸ್ ಅರ್ಹತೆ ಪಡೆದ ಇತರ ತಂಡಗಳು.
ಆಫ್ರಿಕಾ ಕ್ವಾಲಿಫೈಯರ್‌ನಿಂದ ಎರಡು ತಂಡಗಳು ಮತ್ತು ಏಷ್ಯಾ ಹಾಗೂ ಪೂರ್ವ ಏಷ್ಯಾ ಪೆಸಿಫಿಕ್ ಕ್ವಾಲಿಫೈಯರ್‌ನಿಂದ ಮೂರು ತಂಡಗಳು ಟೂರ್ನಿಗೆ ಅರ್ಹತೆ ಪಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.