ADVERTISEMENT

T20 WC: ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾಗೆ 4 ವಿಕೆಟ್ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 17:29 IST
Last Updated 27 ಅಕ್ಟೋಬರ್ 2021, 17:29 IST
ಜೆಜೆ ಸ್ಮಿಟ್
ಜೆಜೆ ಸ್ಮಿಟ್   

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ಅಬುಧಾಬಿಯಲ್ಲಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ನಮೀಬಿಯಾದ ಎಡಗೈ ವೇಗದ ಬೌಲರ್ ರುಬೆನ್‌ ಟ್ರಂಪಲ್‌ಮನ್‌ (17ಕ್ಕೆ 3) ದಾಳಿಗೆ ಸಿಲುಕಿದ ಸ್ಕಾಟ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ಗುರಿ ಬೆನ್ನತ್ತಿದ ನಮೀಬಿಯಾ ಜೆಜೆ ಸ್ಮಿಟ್ (32*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಇನ್ನು ಐದು ಎಸೆತಗಳು ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಈ ಮೂಲಕ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದೆ. ಈ ಮುನ್ನ ಅರ್ಹತಾ ಸುತ್ತಿನಲ್ಲಿ ಗೆದ್ದು ಸೂಪರ್-12 ಹಂತಕ್ಕೆ ಪ್ರವೇಶಿಸುವ ಮೂಲಕ ನಮೀಬಿಯಾ ಇತಿಹಾಸ ರಚಿಸಿತ್ತು. ಅತ್ತ ಸ್ಕಾಟ್ಲೆಂಡ್ ಸತತ ಎರಡನೇ ಸೋಲಿಗೆ ಶರಣಾಗಿದೆ.

ಸಾಧಾರಣ ಮೊತ್ತ ಬೆನ್ನತ್ತಿದ ನಮೀಬಿಯಾ ಪ್ರಯಾಸದ ಗೆಲುವು ದಾಖಲಿಸಿತು. ಕ್ರೇಗ್‌ ವಿಲಿಯಮ್ಸ್ (23), ಮೈಕೆಲ್ ವಾನ್‌ ಲಿಂಗೆನ್‌ (18), ಡೇವಿಡ್ ವೀಸ್ (16) ಹಾಗೂ ಜೆಜೆ ಸ್ಮಿಟ್‌ (32*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 19.1 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು.

23 ಎಸೆತಗಳನ್ನು ಎದುರಿಸಿದ ಸ್ಮಿಟ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಔಟಾಗದೆ ಉಳಿದರು. ಸ್ಕಾಟ್ಲೆಂಡ್ ಪರ ಮೈಕಲ್ ಲೀಸ್ಕ್ ಎರಡು ವಿಕೆಟ್ ಕಬಳಿಸಿದರು.

ಈ ಮೊದಲು ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಮೂರು ವಿಕೆಟ್ ಕಬಳಿಸಿದ ನಮೀಬಿಯಾ ವೇಗಿ ಟ್ರಂಪಲ್‌ಮನ್, ಸ್ಕಾಟ್ಲೆಂಡ್‌ ಮೇಲೆ ಸವಾರಿ ಮಾಡಿದರು. ಪರಿಣಾಮ ಕೇವಲ ಎರಡು ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.

ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. 57 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು. ಈ ನಡುವೆ ಆರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಮೈಕೆಲ್ ಲೀಸ್ಕ್ 44 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿ ತಂಡದ ಮೊತ್ತ 100ರ ಗಡಿ ಕ್ರಮಿಸುವಲ್ಲಿ ನೆರವಾದರು.

27 ಎಸೆತಗಳನ್ನು ಎದುರಿಸಿದ ಲೀಸ್ಕ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು. ಅವರಿಗೆ ತಕ್ಕ ಸಾಥ್ ನೀಡಿದ ಕ್ರಿಸ್ ಗ್ರೀವ್ಸ್ 25 ರನ್ ಗಳಿಸಿದರು.

ನಮೀಬಿಯಾ ಪರ ಟ್ರಂಪಲ್‌ಮನ್ ಮೂರು ವಿಕೆಟ್ ಹಾಗೂ ಜಾನ್ ಫ್ರೈಲಿಂಕ್ ಎರಡು ವಿಕೆಟ್ ಕಿತ್ತು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.