ADVERTISEMENT

ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರಕ್ಕೆ ಸಜ್ಜು?

ಕೋವಿಡ್ ಮೂರನೇ ಅಲೆಯ ಭೀತಿ

ಪಿಟಿಐ
Published 4 ಮೇ 2021, 12:55 IST
Last Updated 4 ಮೇ 2021, 12:55 IST
ಬಿಸಿಸಿಐ ಲೋಗೊ
ಬಿಸಿಸಿಐ ಲೋಗೊ   

ನವದೆಹಲಿ: ಭಾರತದಲ್ಲಿ ಈ ವರ್ಷ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ (ಯುಎಇ) ಸ್ಥಳಾಂತರಿಸುವ ಸಾಧ್ಯತೆ ದಟ್ಟವಾಗಿದೆ. ನವೆಂಬರ್‌ನಲ್ಲಿ ಕೋವಿಡ್‌ನ ಮೂರನೇ ಅಲೆಯ ಭೀತಿ ಇರುವುದರಿಂದ ಟೂರ್ನಿಯಲ್ಲಿ ಭಾಗವಹಿಸಬೇಕಾಗಿದ್ದ ತಂಡಗಳಿಗೆ ಇಲ್ಲಿಗೆ ಆಗಮಿಸುವುದು ಸೂಕ್ತ ಎನಿಸುವುದಿಲ್ಲ ಎಂಬುದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ)ನಿಲುವಾಗಿದೆ.

ಈ ಕುರಿತು ಒಂದು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಐಪಿಎಲ್‌ ಟೂರ್ನಿಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿದ್ದರಿಂದ, 16 ತಂಡಗಳ ವಿಶ್ವಕಪ್ಅನ್ನು ಆಯೋಜಿಸುವ ಕುರಿತು ಬಿಸಿಸಿಐಗೆ ಆತಂಕವಿದೆ.

ಬಿಸಿಸಿಐ ಅಧಿಕಾರಿಗಳು ಈ ಕುರಿತು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಟೂರ್ನಿಯನ್ನು ಯುಎಇಗೆ ಸ್ಥಳಾಂತರಕ್ಕೆ ಹೆಚ್ಚು ಕಡಿಮೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ. ಆದರೆ ಟೂರ್ನಿ ನಡೆಯುವ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.

ADVERTISEMENT

‘ಭಾರತ ಕಳೆದ 70 ವರ್ಷಗಳಲ್ಲೇ ಅತಿ ಸಂಕಷ್ಟದ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಸೆಣಸುತ್ತಿದೆ. ನಾಲ್ಕು ವಾರಗಳಲ್ಲೇ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ಇದು, ಜಾಗತಿಕ ಮಟ್ಟದ ಟೂರ್ನಿಯನ್ನು ಆಯೋಜಿಸುವುದು ಖಂಡಿತ ಸುರಕ್ಷಿತವಲ್ಲ ಎಂಬುದರ ಸೂಚಕವಾಗಿದೆ‘ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಾರತಕ್ಕೆ ನವೆಂಬರ್‌ನಲ್ಲಿ ಕೋವಿಡ್‌ನ ಮೂರನೇ ಅಲೆಯ ಭೀತಿ ಇದೆ. ಹೀಗಾಗಿ ಬಿಸಿಸಿಐ, ಆತಿಥೇಯ ಮಂಡಳಿಯಾಗಿಯೇ ಉಳಿಯಲಿದ್ದು, ಟೂರ್ನಿಯು ಬಹುತೇಕ ಯುಎಇಗೆ ಸ್ಥಳಾಂತರವಾಗಲಿದೆ‘ ಎಂದು ಅವರು ಹೇಳಿದರು.

ಜೂನ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಸಭೆ ನಡೆಯಲಿದ್ದು, ವಿಶ್ವಕಪ್ ಟೂರ್ನಿಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ ಐಪಿಎಲ್‌ ರದ್ದಾದ ಈ ಹಂತದಲ್ಲಿ ವಿಶ್ವಕಪ್ಅನ್ನು ಭಾರತದಲ್ಲೇ ನಡೆಸುವುದು ದೂರದ ಮಾತು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.