ADVERTISEMENT

ಟಿ20 ವಿಶ್ವಕಪ್ ಸೂಪರ್ 8: ಕಠಿಣ ಪರೀಕ್ಷೆಯ ಹಾದಿಯಲ್ಲಿ ಸೂರ್ಯ ಪಡೆ

ಸೂಪರ್ 8: ಭಾರತ–ದಕ್ಷಿಣ ಆಫ್ರಿಕಾ ಹಣಾಹಣಿ ಇಂದು; ಅಭಿಷೇಕ್ ಶರ್ಮಾಗೆ ಲಯಕ್ಕೆ ಮರಳುವ ಒತ್ತಡ

ಪಿಟಿಐ
Published 21 ಫೆಬ್ರುವರಿ 2026, 19:29 IST
Last Updated 21 ಫೆಬ್ರುವರಿ 2026, 19:29 IST
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್  –ಪಿಟಿಐ ಚಿತ್ರ
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್  –ಪಿಟಿಐ ಚಿತ್ರ   

ಅಹಮದಾಬಾದ್: ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗ ನಿಜವಾದ ‘ಪರೀಕ್ಷೆ’ ಆರಂಭವಾಗಲಿದೆ. 

ಆತಿಥೇಯ ಭಾರತ ತಂಡವು ಸೂಪರ್ 8ರ ಹಂತದಲ್ಲಿ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ಎದುರು ತನ್ನ ಅಭಿಯಾನ ಆರಂಭಿಸಲಿದೆ.  ಭಾರತವು ತನ್ನ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳ ಪೈಪೋಟಿ ಎದುರಿಸಬೇಕಿದೆ. ಎಲ್ಲ ತಂಡಗಳೂ ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯ ಹೊಂದಿವೆ. ಕನಿಷ್ಠ ಎರಡು ಜಯ ಸಾಧಿಸಿದರೆ ಸೆಮಿಫೈನಲ್ ಪ್ರವೇಶದ ಹಾದಿ ಸುಗಮವಾಗಲಿದೆ.

ಎರಡು ವರ್ಷಗಳ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಸೋಲಿನ ಸೇಡು ತೀರಿಸಿಕೊಳ್ಳುವ ಛಲದಲ್ಲಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಭಾರತ ತಂಡವು ಕೆಲವು ಸುಧಾರಣೆಗಳೊಂದಿಗೆ ಕಣಕ್ಕಿಳಿಯಬೇಕಿದೆ. 

ADVERTISEMENT

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಬ್ಯಾಟರ್ ತಿಲಕ್ ವರ್ಮಾ ಅವರು ಅನಗತ್ಯವಾದ  ಹೊಡೆತಗಳ ಮೂಲಕ ಔಟಾಗುವುದನ್ನು ತಪ್ಪಿಸಿಕೊಳ್ಳಬೇಕಿದೆ.  ದೊಡ ಇನಿಂಗ್ಸ್‌ಗೆ ‘ಲಂಗರು’ ಹಾಕುವ ಹೊಣೆಯನ್ನು ನಿಭಾಯಿಸ‌ಬೇಕಿದೆ. ಏಕೆಂದರೆ; ಎದುರಾಳಿ ತಂಡದಲ್ಲಿರುವ ಬೌಲಿಂಗ್ ಪಡೆಯು ಬಲಾಢ್ಯವಾಗಿದೆ.  ವೇಗಿಗಳಾದ ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್ ಮತ್ತು ಏಡನ್ ಮರ್ಕರಂ ಅವರು ಅಮೋಘ ಲಯದಲ್ಲಿ ಇದ್ದಾರೆ. 

ಗುಂಪು ಹಂತದಲ್ಲಿ ಭಾರತದ ಬ್ಯಾಟಿಂಗ್‌ ಪಡೆಯ ಪ್ರದರ್ಶನ ಅಸ್ಥಿರವಾಗಿತ್ತು. ಇಶಾನ್ ಕಿಶನ್ (ಎರಡು ಅರ್ಧಶತಕ) 202ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಆದರೆ  ಅಗ್ರಕ್ರಮಾಂಕದ ಇನ್ನೂ ಮೂವರು ಬ್ಯಾಟರ್‌ಗಳು ನಿರೀಕ್ಷೆಗೆ ತಕ್ಕ ಆಟವಾಡಿಲ್ಲ. ಅದರಲ್ಲೂ ಅಭಿಷೇಕ್ ಶರ್ಮಾ ಆಡಿದ ಮೂರು ಪಂದ್ಯಗಳಲ್ಲಿಯೂ ಸೊನ್ನೆ ಸುತ್ತಿದ್ದಾರೆ.  ಇದು ನಂತರ ಬರುವ ತಿಲಕ್ ಮತ್ತು  ಸೂರ್ಯ ಅವರ ಮೇಲೆ ಹೆಚ್ಚಿನ ಒತ್ತಡ ಬೀಳಲು ಕಾರಣವಾಗಿದೆ. ಅವರು ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಹೊಣೆ ನಿಭಾಯಿಸಬೇಕಿದೆ.  ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರು ಕಳೆದ ಪಂದ್ಯಗಳಲ್ಲಿ ಬೀಸಾಟವಾಡಿದ್ದರಿಂದ ತಂಡವು ಸೋಲಿನಿಂದ ಪಾರಾಗಲು ಸಾಧ್ಯವಾಯಿತು. 

ಅಭಿಷೇಕ್ ಅವರು ಆಫ್‌ಸ್ಪಿನ್ನರ್‌ಗಳ ಮುಂದೆ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ದಕ್ಷಿಣ ಆಫ್ರಿಕಾದ ನಾಯಕ ಏಡನ್ ಮರ್ಕರಂ ಅವರು ಇನಿಂಗ್ಸ್ ಆರಂಭದಲ್ಲಿಯೇ ಸ್ಪಿನ್‌ ಬೌಲರ್‌ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಅಭಿಷೇಕ್ ವಿಫಲವಾದಾಗ ತಿಲಕ್ ಅವರು ದೊಡ್ಡ ಇನಿಂಗ್ಸ್ ಆಡಿಲ್ಲ. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅವರು 24 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ನೆದರ್ಲೆಂಡ್ಸ್ ವಿರುದ್ಧ 27 ಎಸೆತಗಳಲ್ಲಿ31 ರನ್ ಹೊಡೆದಿದ್ದರು. ಅವರ ಸ್ಟ್ರೈಕ್‌ರೇಟ್ ಕೇವಲ 120 ಇದೆ. 

ಅಮೆರಿಕ ಎದುರಿನ ಪಂದ್ಯದಲ್ಲಿ ಸೂರ್ಯ ಅಜೇಯ 84 (49ಎಸೆತ) ರನ್ ಗಳಿಸಿ ತಂಡದ ಜಯಕ್ಕೆ ಕಾರಣರಾಗಿದ್ದರು. ಆದರೆ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಎದುರಿನ ಪಂದ್ಯಗಳಲ್ಲಿ ಸೂರ್ಯ ಆಟ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಅವರ ಸ್ಟ್ರೈಕ್‌ರೇಟ್  ಕೂಡ 136ರಷ್ಟು (ಅವರ ವೈಯಕ್ತಿಕ ಶ್ರೇಷ್ಠ 163 ಇದೆ) ಸಾಧಾರಣ ಮಟ್ಟದಲ್ಲಿದೆ.  

ಆದರೆ ಭಾರತದ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ. ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಪ್ರಮುಖ ಜೊತೆಯಾಟಗಳಿಗೆ ತಡೆಯೊಡ್ಡಬಲ್ಲರು. ಹಾರ್ದಿಕ್ ಮತ್ತು ಶಿವಂ ಅವರು  ಪ್ರಮುಖ ಘಟ್ಟಗಳಲ್ಲಿ ತಮ್ಮ ಬೌಲಿಂಗ್ ಮೂಲಕ ನೆರವಾಗುವ ಸಮರ್ಥರು. ದಕ್ಷಿಣ ಆಫ್ರಿಕಾದ ಬೀಸಾಟವೀರರಾದ ಕ್ವಿಂಟನ್ ಡಿ ಕಾಕ್, ಮರ್ಕರಂ, ರಿಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್ ಹಾಗೂ ಮಾರ್ಕೊ ಯಾನ್ಸೆನ್ ಅವರನ್ನು ಕಟ್ಟಿಹಾಕಲು ಬೌಲರ್‌ಗಳು ಶಿಸ್ತುಬದ್ಧ ತಂತ್ರಗಾರಿಕೆಯೊಂದಿಗೆ ಆಡುವುದು ಅಗತ್ಯವಾಗಿದೆ. ಅಲ್ಲದೇ ಬೌಲರ್‌ಗಳು ಸಫಲರಾಗಬೇಕಾದರೆ ಫೀಲ್ಡಿಂಗ್ ಲೋಪಗಳು ಕಡಿಮೆಯಾಗಬೇಕು. ಕ್ಯಾಚ್‌ಗಳು ಮಣ್ಣುಪಾಲಾಗದಂತೆ ನೋಡಿಕೊಳ್ಳಬೇಕು. 

ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ಈ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ರಾತ್ರಿಯ ಇಬ್ಬನಿಯಲ್ಲಿ ಬೌಲಿಂಗ್ ಮಾಡುವುದು ಸವಾಲಾಗಬಹುದು. ಆದ್ದರಿಂದ ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು. 

ಭಾರತ ತಂಡದ ಆಟಗಾರರಾದ ಶಿವಂ ದುಬೆ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್   –ಪಿಟಿಐ ಚಿತ್ರ
ದಕ್ಷಿಣ ಆಫ್ರಿಕಾ ತಂಡದ ಡಿವಾಲ್ಡ್ ಬ್ರೆವಿಸ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಿದರು  –ಪಿಟಿಐ ಚಿತ್ರ

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಇಶಾನ್ ಕಿಶನ್ (ವಿಕೆಟ್‌ಕೀಪರ್) ಅಭಿಷೇಕ್ ಶರ್ಮಾ ತಿಲಕ್ ವರ್ಮಾ ಶಿವಂ ದುಬೆ ಹಾರ್ದಿಕ್ ಪಾಂಡ್ಯ ರಿಂಕು ಸಿಂಗ್ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಜಸ್‌ಪ್ರೀತ್ ಬೂಮ್ರಾ ವರುಣ್ ಚಕ್ರವರ್ತಿ ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್) ಮೊಹಮ್ಮದ್ ಸಿರಾಜ್ ವಾಷಿಂಗ್ಟನ್ ಸುಂದರ್. ಅರ್ಷದೀಪ್ ಸಿಂಗ್.

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್) ರಿಯಾನ್ ರಿಕೆಲ್ಟನ್ ಡೆವಾಲ್ಡ್ ಬ್ರೆವಿಸ್ ಟ್ರಿಸ್ಟನ್ ಸ್ಟಬ್ಸ್ ಡೇವಿಡ್ ಮಿಲ್ಲರ್ ಮಾರ್ಕೊ ಯಾನ್ಸೆನ್ ಕಗಿಸೊ ರಬಾಡ ಲುಂಗಿ ಎನ್‌ಗಿಡಿ ಕೇಶವ್ ಮಹಾರಾಜ್ ಕಾರ್ಬಿನ್ ಬಾಷ್ ಎನ್ರಿಚ್ ನಾಕಿಯಾ ಕೆವೆನಾ ಮಫಾಕಾ ಜಾರ್ಜ್ ಲಿಂಡೆ ಜೇಸನ್ ಸ್ಮಿತ್.  ಪಂದ್ಯ ಆರಂಭ :ರಾತ್ರಿ 7 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಜಿಯೊಹಾಟ್‌ಸ್ಟಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.