
ಹರ್ಮೀತ್ ಸಿಂಗ್
ಚೆನ್ನೈ: ಸಾಯಿತೇಜ ಮುಕ್ಕಮಲ್ಲ (79, 51 ಎಸೆತ) ಅವರ ಅರ್ಧಶತಕದ ಆಟವಾಡಿ ಅಮೆರಿಕದ ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು. ನಂತರ ಎಡಗೈ ಸ್ಪಿನ್ನರ್ ಹರ್ಮೀತ್ ಸಿಂಗ್ (4–0–21–4) ಅವರ ಪರಿಣಾಮಕಾರಿ ದಾಳಿಯಲ್ಲಿ ಡಚ್ ಪಡೆಯ ಕುಸಿತಕ್ಕೆ ಕಾರಣರಾದರು. ಅಮೆರಿಕ ತಂಡವು, ಟಿ20 ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ 93 ರನ್‌ಗಳ ಅರ್ಹ ಜಯ ಪಡೆಯಿತು.
ಎಂ.ಎ.ಚಿದಂಬರಂ ಕ್ರೀಡಾಂಗಣ ದಲ್ಲಿ ಟಾಸ್ ಸೋತ ಅಮೆರಿಕ ತಂಡ 6 ವಿಕೆಟ್‌ಗೆ 196 ರನ್‌ಗಳ ಒಳ್ಳೆಯ ಮೊತ್ತ ಪೇರಿಸಿತು. ಮೂರನೇ ಕ್ರಮಾಂಕದಲ್ಲಿ ಮಿಂಚಿದ ಸಾಯಿತೇಜ್ ಐದು ಬೌಂಡರಿ, ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ನಾಯಕ ಮೊನಾಂಕ್ ಪಟೇಲ್ (36) ಜೊತೆ ಎರಡನೇ ವಿಕೆಟ್‌ಗೆ 55 ರನ್ ಸಹ ಸೇರಿಸಿದರು. ಆದರೆ 200ರ ಸಮೀಪದ ಮೊತ್ತ ಗಳಿಸಲು ಶುಭಂ ರಾಂಜನೆ (ಅಜೇಯ 48, 24 ಎಸೆತ) ಅವರ ಬೀಸಾಟ ಕಾರಣವಾಯಿತು. ಸಾಯಿತೇಜ್ ಅವರು ಹೈದರಾಬಾದ್‌ನ ವಿ.ವಿ.ಎಸ್. ಲಕ್ಷ್ಮಣ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೌಶಲ ಕಲಿತವರು.
ಅಮೆರಿಕನ್ನರ ಸಂಘಟಿತ ದಾಳಿಯೆದುರು ನೆದರ್ಲೆಂಡ್ಸ್ ತಂಡ ಯಾವ ಹಂತದಲ್ಲೂ ಹೋರಾಟ ನೀಡುವಂತೆ ಕಾಣಲಿಲ್ಲ. ತಂಡ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡು 15.5 ಓವರುಗಳಲ್ಲಿ 103 ರನ್‌ಗಳಿಗೆ ಕುಸಿಯಿತು. ಆಲ್‌ರೌಂಡರ್ ಬಾಸ್ ಡಿ ಲೀಡ್ (23) ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಅವರು ಬೌಲಿಂಗ್‌ನಲ್ಲೂ 3 ವಿಕೆಟ್ ಪಡೆದಿದ್ದರು. ಹರ್ಮೀತ್ ಸಿಂಗ್ ಅವರಿಗೆ ಶಾಡ್ಲಿ ವಾನ್ ಶಾಲ್ವಿಕ್ (21ಕ್ಕೆ3), ಮೊಹಮ್ಮದ್ ಮೊಹ್ಸಿನ್ (19ಕ್ಕೆ2) ಸಮರ್ಥ ಬೆಂಬಲ ನೀಡಿದರು.
ಸಂಕ್ಷಿಪ್ತ ಸ್ಕೋರು:
ಅಮೆರಿಕ: 20 ಓವರುಗಳಲ್ಲಿ 6 ವಿಕೆಟ್‌ಗೆ 196 (ಮೊನಾಂಕ್ ಪಟೇಲ್ 36, ಸಾಯಿತೇಜ ಮುಕ್ಕಮಲ್ಲ 79, ಶುಭಂ ರಾಂಜನೆ ಔಟಾಗದೇ 48; ಲೋಗನ್ ವ್ಯಾನ್ ಬೀಕ್ 28ಕ್ಕೆ1, ಬಾಸ್ ಡಿ ಲೀಡ್ 37ಕ್ಕೆ3);
ನೆದರ್ಲೆಂಡ್ಸ್: 15.3 ಓವರುಗಳಲ್ಲಿ 103 (ಬಾಸ್ ಡಿ ಲೀಡ್ 23; ಹರ್ಮೀತ್ ಸಿಂಗ್ 21ಕ್ಕೆ4, ಶಾಡ್ಲಿ ವಾನ್ ಶಾಲ್ವಿಕ್ 21ಕ್ಕೆ3, ಮೊಹಮ್ಮದ್ ಮೊಹ್ಸಿನ್ 19ಕ್ಕೆ2). ಪಂದ್ಯದ ಆಟಗಾರ: ಹರ್ಮೀತ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.