ADVERTISEMENT

ಟಿ20 ವಿಶ್ವಕಪ್ ಬಳಿಕ ಕೋಚ್ ಸ್ಥಾನ ತೊರೆಯುವ ಸೂಚನೆ ನೀಡಿದ ರವಿಶಾಸ್ತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2021, 4:25 IST
Last Updated 18 ಸೆಪ್ಟೆಂಬರ್ 2021, 4:25 IST
ರವಿಶಾಸ್ತ್ರಿ
ರವಿಶಾಸ್ತ್ರಿ   

ಲಂಡನ್: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಹುದ್ದೆಯನ್ನು ತೊರೆಯುವ ಬಗ್ಗೆ ರವಿಶಾಸ್ತ್ರಿ ಸೂಚನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮಾಜಿ ಆಟಗಾರ ರವಿಶಾಸ್ತ್ರಿ, 'ಲಭಿಸಿರುವ ಸ್ವಾಗತವನ್ನು ಮೀರಿ ತಂಗಬಾರದು' ಎಂದು ಹೇಳಿದ್ದಾರೆ.

'ನಾನು ಬಯಸಿದ್ದೆನ್ನೆಲ್ಲ ಸಾಧಿಸಿದ್ದೇನೆ. ಐದು ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನ, ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಸರಣಿ ಗೆಲುವು, ಇಂಗ್ಲೆಂಡ್‌ನಲ್ಲಿ ಸರಣಿ ಗೆಲುವು. ನನ್ನ ಪಾಲಿಗಿದು ಕಟ್ಟಕಡೆಯ ಗುರಿಯಾಗಿತ್ತು' ಎಂದು ಹೇಳಿದ್ದಾರೆ.

'ಆಸ್ಟ್ರೇಲಿಯಾ ವಿರುದ್ಧ ಗೆಲುವು ಮತ್ತು ಕೋವಿಡ್ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಗೆಲುವು. ನಾವದನ್ನು ಸಾಧಿಸಿದ್ದೇವೆ. ಇಂಗ್ಲೆಂಡ್ ವಿರುದ್ಧ 2-1ರ ಅಂತರದ ಮುನ್ನಡೆ ಗಳಿಸಿದ್ದೇವೆ. ಲಾರ್ಡ್ಸ್ ಹಾಗೂ ಓವಲ್ ಗೆಲುವು ವಿಶೇಷವಾಗಿತ್ತು' ಎಂದು ಶಾಸ್ತ್ರಿ ಹೇಳಿಕೆಯನ್ನು 'ದಿ ಗಾರ್ಡಿಯನ್' ವರದಿ ಮಾಡಿದೆ.

'ನಾವು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಜಗತ್ತಿನ ಎಲ್ಲ ತಂಡಗಳನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದೇವೆ. ಟಿ20 ವಿಶ್ವಕಪ್ ಗೆದ್ದರೆ ಇನ್ನೂ ಮಧುರವಾಗಲಿದೆ. ಇದಕ್ಕಿಂತಲೂ ಮಿಗಿಲಾಗಿ ಬೇರೆ ಏನು ಇಲ್ಲ. ನಾನು ಒಂದು ವಿಷಯದಲ್ಲಿ ನಂಬಿಕೆಯಿಟ್ಟಿದ್ದೇನೆ. ನಮಗೆ ಲಭಿಸಿರುವ ಸ್ವಾಗತವನ್ನು ಮೀರಬಾರದು. ನಾನದನ್ನು ಹೇಳಲು ಬಯಸುತ್ತೇನೆ. ಈ ತಂಡದಿಂದ ನಾನೇನು ಸಾಧಿಸಲು ಬಯಸಿದ್ದೆನೋ ಅದನ್ನು ನಿರೀಕ್ಷೆಗಿಂತಲೂ ಹೆಚ್ಚು ಸಾಧನೆ ಮಾಡಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಗೆಲುವು, ಕೋವಿಡ್ ವರ್ಷದಲ್ಲೂ ಇಂಗ್ಲೆಂಡ್‌ನಲ್ಲಿ ಗೆಲುವು. ಇವೆಲ್ಲವೂ ನಾಲ್ಕು ದಶಕಗಳ ನನ್ನ ಕ್ರಿಕೆಟ್ ಜೀವನದಲ್ಲಿ ಅತ್ಯಂತ ಸಂತೃಪ್ತಿದಾಯಕ ಕ್ಷಣವಾಗಿದೆ' ಎಂದಿದ್ದಾರೆ.

ಪುಸಕ್ತ ಸಮಾರಂಭದಲ್ಲಿ ಭಾಗವಹಿಸಿರುವುದಕ್ಕೆ ಬೇಸರವಿಲ್ಲ...
ಏತನ್ಮಧ್ಯೆ ಇಂಗ್ಲೆಂಡ್ ಸರಣಿ ವೇಳೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಜರಾಗಿದ್ದಕ್ಕೆ ಬೇಸರಪಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ.

ಈ ಸಮಾರಂಭದ ಬಳಿಕ ರವಿಶಾಸ್ತ್ರಿ ಅವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಆದರೆ ಈ ವದಂತಿಗಳನ್ನು ಶಾಸ್ತ್ರಿ ನಿರಾಕರಿಸಿದ್ದಾರೆ.

'ಪುಸಕ್ತ ಸಮಾರಂಭದಲ್ಲಿ ಭಾಗವಹಿಸಿದ್ದರಿಂದ ನನಗೆ ಕೋವಿಡ್ ಸೋಂಕು ತಗುಲಲಿಲ್ಲ. ಏಕೆಂದರೆ ಆ ಸಮಾರಂಭ ಆಗಸ್ಟ್ 31ರಂದು ನಡೆದಿತ್ತು. ಸೆಪ್ಟೆಂಬರ್ 3ರಂದು ನನಗೆ ಸೋಂಕು ತಗುಲಿತ್ತು. ಅಂದರೆ ಮೂರು ದಿನಗಳಲ್ಲೇ ಸೋಂಕು ತಗುಲಲು ಸಾಧ್ಯವಿಲ್ಲ. ಓವಲ್ ಟೆಸ್ಟ್‌ನಲ್ಲಿ 5,000 ಜನರು ಬಳಸುವ ಮೆಟ್ಟಿಲುಗಳನ್ನು ಬಳಸಿದ್ದೇನೆ. ಹಾಗಾದರೆ ಪುಸ್ತಕ ಸಮಾರಂಭವನ್ನು ಬೊಟ್ಟು ಮಾಡಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.