ADVERTISEMENT

ಟೀಂ ಇಂಡಿಯಾ ಪ್ರಮುಖ ಬೌಲರ್ ಭುವನೇಶ್ವರ್‌‌ ಕುಮಾರ್‌ ತಂದೆ ಕ್ಯಾನ್ಸರ್‌ನಿಂದ ನಿಧನ

ಏಜೆನ್ಸೀಸ್
Published 20 ಮೇ 2021, 14:43 IST
Last Updated 20 ಮೇ 2021, 14:43 IST
ಭುವನೇಶ್ವರ್‌‌ ಕುಮಾರ್‌
ಭುವನೇಶ್ವರ್‌‌ ಕುಮಾರ್‌   

ಮೀರತ್‌ (ಉತ್ತರ ಪ್ರದೇಶ): ಭಾರತ ಕ್ರಿಕೆಟ್‌ ತಂಡದ ಮಧ್ಯಮ ವೇಗದ ಬೌಲರ್‌ ಭುವನೇಶ್ವರ್‌‌ ಕುಮಾರ್‌ ಅವರ ತಂದೆ ಕಿರಣ್‌ ಪಾಲ್‌ ಸಿಂಗ್‌ ಇಂದು ನಿಧನರಾದರು. ಅವರುಯಕೃತ್ತು (ಲಿವರ್‌) ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಕ್ರೀಡಾ ವೆಬ್‌ಸೈಟ್‌ ʼಕ್ರಿಕ್‌ಇನ್ಫೊʼ ವರದಿ ಮಾಡಿದೆ.

ಕಿರಣ್‌ ಪಾಲ್‌ ಅವರಿಗೆ ಕ್ಯಾನ್ಸರ್‌ ಇರುವುದು ಕಳೆದ ಸೆಪ್ಟೆಂಬರ್‌ನಲ್ಲಿ ಗೊತ್ತಾಗಿತ್ತು. 14 ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಮಂಗಳವಾರವಷ್ಟೇ ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲಾಗಿತ್ತು. ಆದರೆ, ಇಂದು ಕೊನೆಯುಸಿರೆಳೆದಿದ್ದಾರೆ.

ಕಿರಣ್‌ ಪಾಲ್‌ ಅವರು ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ನಿವೃತ್ತರಾಗಿದ್ದರು.

ADVERTISEMENT

ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಸ್ಪಿನ್ನರ್‌ ಪಿಯೂಷ್‌ ಚಾವ್ಲಾ ಅವರ ತಂದೆ ಪ್ರಮೋದ್‌ ಕುಮಾರ್‌ ಚಾವ್ಲಾ ಅವರು ಕೋವಿಡ್‌ನಿಂದಾಗಿ ಕಳೆದವಾರ ನಿಧನರಾಗಿದ್ದರು. ಅರ್ಧಕ್ಕೆ ನಿಂತ ಈ ಬಾರಿಯ (2021ರ) ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಮಿಂಚಿದ್ದ ಯುವ ವೇಗಿ ಚೇತನ್‌ ಸಕಾರಿಯಾ ಅವರ ತಂದೆಯೂ ಕೆಲವು ದಿನಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದರು.

ಭಾರತ ಮಹಿಳಾ ಕ್ರಿಕೆಟ್‌ ತಂಡದ ಪ್ರಮುಖ ಆಲ್‌ರೌಂಡರ್‌ ವೇದಾ ಕೃಷ್ಣಮೂರ್ತಿ ಅವರು ಕಳೆದ ಏಪ್ರಿಲ್‌ನಲ್ಲಿ ತಾಯಿಯನ್ನು ಮತ್ತು ಮೇನಲ್ಲಿ ಸಹೋದರಿಯನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದರು. ಮಹಿಳಾ ಕ್ರಿಕೆಟ್‌ ತಂಡದ ಮತ್ತೊಬ್ಬ ಆಟಗಾರ್ತಿ ಪ್ರಿಯಾ ಪೂನಿಯಾ ಅವರ ತಾಯಿಯೂ ಕೋವಿಡ್‌ನಿಂದ ಸೋಮವಾರ ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.