ADVERTISEMENT

INDvsENG: ಅಶ್ವಿನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್‌ ತತ್ತರ; 134 ರನ್‌ಗಳಿಗೆ ಆಲೌಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2021, 12:37 IST
Last Updated 14 ಫೆಬ್ರುವರಿ 2021, 12:37 IST
ಸಂಭ್ರಮದಲ್ಲಿ ಟೀಂ ಇಂಡಿಯಾ–ಸಾಂದರ್ಭಿಕ ಚಿತ್ರ
ಸಂಭ್ರಮದಲ್ಲಿ ಟೀಂ ಇಂಡಿಯಾ–ಸಾಂದರ್ಭಿಕ ಚಿತ್ರ   

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಭಾರತದ ಬೌಲರ್‌ಗಳು 134 ರನ್‌ಗಳಿಗೆ ಕಟ್ಟಿ ಹಾಕಿದರು. ಈ ಮೂಲಕ ಟೀಂ ಇಂಡಿಯಾ 195 ರನ್‌ ಮುನ್ನಡೆ ಸಾಧಿಸಿದೆ.

ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಸ್ಪಿನ್‌ ಮೋಡಿಗೆ ತತ್ತರಿಸಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ತಂಡದ ರನ್‌ 134 ತಲುಪುವಲ್ಲಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡರು. ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದ ದಾಖಲೆ ಮಾಡಿದರು.

ಈ ಮೊದಲು ಭಾರತ ತಂಡವು 329 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ ಆಂಗ್ಲರ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಆತಿಥೇಯರು ಯಶಸ್ವಿಯಾದರು. ಭಾರತೀಯ ನಿಖರ ದಾಳಿಗೆ ಕುಸಿತ ಅನುಭವಿಸಿದ ಆಂಗ್ಲರ ಪಡೆ ಎರಡನೇ ದಿನದಾಟದ ಟೀ ವಿರಾಮದ ಹೊತ್ತಿಗೆ 49.2 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು.

ADVERTISEMENT

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅಶ್ವಿನ್‌ 5 ವಿಕೆಟ್‌, ಇಶಾಂತ್‌ ಶರ್ಮಾ ಮತ್ತು ಅಕ್ಸರ್‌ ಪಟೇಲ್‌ ತಲಾ ಎರಡು ವಿಕೆಟ್‌ ಕಬಳಿಸಿದರೆ, ಮೊಹಮ್ಮದ್ ಸಿರಾಜ್‌ ಒಂದು ವಿಕೆಟ್‌ ಪಡೆದರು.

195ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ತಂಡ ಶುಭಮನ್‌ ಗಿಲ್‌ (14 ರನ್‌) ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ರೋಹಿತ್‌ ಶರ್ಮಾ (25 ರನ್‌) ಮತ್ತು ಚೇತೇತ್ವರ್‌ ಪೂಜಾರ (7 ರನ್‌) ಈಗ ಕ್ರೀಸ್‌ನಲ್ಲಿದ್ದಾರೆ.

ದಿನದ ಅಂತ್ಯಕ್ಕೆ ಭಾರತ 18 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 54 ರನ್‌ ಗಳಿಸಿದ್ದು, 249 ರನ್‌ ಮುನ್ನಡೆ ಸಾಧಿಸಿದೆ.

ಪಂತ್ ಫಿಫ್ಟಿ;ಭಾರತ 329ಕ್ಕೆ ಆಲೌಟ್...
ಈ ಮೊದಲು ರೋಹಿತ್ ಶರ್ಮಾ ಅಮೋಘ ಶತಕ (161) ಮತ್ತು ಅಜಿಂಕ್ಯ ರಹಾನೆ (67) ಹಾಗೂ ರಿಷಭ್ ಪಂತ್ (58*) ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಮ್ ಇಂಡಿಯಾ 329 ರನ್‌ಗಳಿಗೆ ಆಲೌಟ್ ಆಗಿತ್ತು.

ಆರು ವಿಕೆಟ್ ನಷ್ಟಕ್ಕೆ 300 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ಮತ್ತಷ್ಟು 29 ರನ್ ಗಳಿಸುವಷ್ಟರಲ್ಲಿ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 95.5 ಓವರ್‌ಗಳಲ್ಲಿ 329 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಎರಡನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಅಜೇಯ ಅರ್ಧಶತಕ ಸಾಧನೆ ಮಾಡಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು.

77 ಎಸೆತಗಳನ್ನು ಎದುರಿಸಿದ ಪಂತ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (5), ಇಶಾಂತ್ ಶರ್ಮಾ (0), ಕುಲ್‌ದೀಪ್ ಯಾದವ್ (0) ಹಾಗೂ ಮೊಹಮ್ಮದ್ ಸಿರಾಜ್ (4) ನಿರಾಸೆ ಮೂಡಿಸಿದರು.

ಇಂಗ್ಲೆಂಡ್ ಪರ ಮೊಯಿನ್ ಅಲಿ ನಾಲ್ಕು, ಒಲ್ಲಿ ಸ್ಟೋನ್ ಮೂರು, ಜ್ಯಾಕ್ ಲೀಚ್ ಎರಡು ಮತ್ತು ನಾಯಕ ಜೋ ರೂಟ್ ಒಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.