ADVERTISEMENT

ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿ: ಅಶ್ವಿನ್ ಸ್ಪಿನ್ ಬಲ; ಹೆಡ್‌ ಛಲ

ಭಾರತದ ಎದುರು ಪರದಾಡಿದ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:53 IST
Last Updated 7 ಡಿಸೆಂಬರ್ 2018, 17:53 IST
   

ಅಡಿಲೇಡ್: ಭಾರತದ ಬೌಲರ್‌ಗಳ ಸಂಘಟಿತ ಹೋರಾಟದ ಮುಂದೆ ಮೊದಲ ಇನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿದ್ದ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಆಸರೆಯಾಗಿದ್ದಾರೆ.

ಇಲ್ಲಿ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಸ್ಪಿನ್ ಮೋಡಿ ಮತ್ತು ಹೆಡ್‌ ಛಲದ ಬ್ಯಾಟಿಂಗ್‌ ಗೆ ಸಾಕ್ಷಿಯಾಯಿತು. ಗುರುವಾರ ಆರಂಭವಾದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಅವರ ಸುಂದರ ಶತಕದ ಬಲದಿಂದ ತಂಡವು 9 ವಿಕೆಟ್‌ಗಳಿಗೆ 250 ರನ್ ಗಳಿಸಿತು. ಈ ಮೊತ್ತಕ್ಕೆ ಎರಡನೇ ದಿನ ಬೆಳಿಗ್ಗೆ ಒಂದೂ ರನ್ ಸೇರಲಿಲ್ಲ. ಮೊಹಮ್ಮದ್ ಶಮಿ ಔಟಾಗುವುದರೊಂದಿಗೆ ತಂಡದ ಬ್ಯಾಟಿಂಗ್‌ಗೆ ತೆರೆ ಬಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು ದಿನದಾಟದ ಕೊನೆಗೆ 88 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 191 ರನ್ ಗಳಿಸಿತು. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಟ್ರಾವಿಸ್ ಹೆಡ್ (ಬ್ಯಾಟಿಂಗ್ 61) ಮತ್ತುಪೀಟರ್ ಹ್ಯಾಂಡ್ಸ್‌ಕಂಬ್ (31 ರನ್) ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು.

ಬ್ಯಾಟಿಂಗ್ ಆರಂಭಿಸಿದ ಆತಿಥೇಯರಿಗೆ ಇಶಾಂತ್ ಶರ್ಮಾ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಪೆಟ್ಟು ಕೊಟ್ಟರು. ಆ್ಯರನ್ ಫಿಂಚ್ ವಿಕೆಟ್ ಪಡೆದು ಸಂಭ್ರಮಿಸಿದರು. ನಂತರ ಅಶ್ವಿನ್ ತಮ್ಮ ಸ್ಪಿನ್ ಮೋಡಿ ಆರಂಭಿಸಿದರು. ಮಧ್ಯಮವೇಗಿಗಳಿಗೆ ಉತ್ತಮ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಅಶ್ವಿನ್ ಸಫಲರಾಗಿದ್ದು ವಿಶೇಷ.

ADVERTISEMENT

22ನೇ ಓವರ್‌ನಲ್ಲಿ ಮಾರ್ಕಸ್ ಹ್ಯಾರಿಸ್‌, 28ನೇ ಓವರ್‌ನಲ್ಲಿ ಶಾನ್ ಮಾರ್ಷ್‌, 40ನೇ ಓವರ್‌ನಲ್ಲಿ ಉಸ್ಮಾನ್ ಖ್ವಾಜಾ ವಿಕೆಟ್‌ ಪಡೆದು ಮಿಂಚಿದರು.

ಇನ್ನೊಂದೆಡೆ ತಮ್ಮ ಸ್ವಿಂಗ್ ಅಸ್ತ್ರಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಕಬಳಿಸಿದರು. ಇಶಾಂತ್ ಕೂಡ ಟಿಮ್ ಪೇನ್ ವಿಕೆಟ್ ಪಡೆದು ಆಸ್ಟ್ರೇಲಿಯಾದ ನೋವು ಹೆಚ್ಚಿಸಿದರು!

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಟ್ರಾವಿಸ್ ಹೆಡ್ ತಾಳ್ಮೆಯ ಆಟಕ್ಕೆ ಮೊರೆಹೋದರು. ರಕ್ಷಣಾತ್ಮಕ ಹೊಡೆತಗಳ ಮೂಲಕ ಬೌಲರ್‌ಗಳಿಗೆ ಸವಾಲೊಡ್ಡಿದರು. ತಂಡವು ಸರ್ವಪತನ ಕಾಣದಂತೆ ನೋಡಿಕೊಂಡರು. ಮೊದಲ ಇನಿಂಗ್ಸ್‌ನ ಬಾಕಿ ಚುಕ್ತಾ ಮಾಡಲು ಇನ್ನೂ 59 ರನ್‌ ಗಳ ಅಗತ್ಯವಿದೆ. ಬೆಳಿಗ್ಗೆಯ ಅವಧಿಯಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರೆ ಆತಿಥೇಯರಿಗೆ ಮುನ್ನಡೆ ಪಡೆಯುವ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.