ವೆಸ್ಟ್ ಇಂಡೀಸ್ ತಂಡದ ಜಾನ್ ಕ್ಯಾಂಪ್‌ಬೆಲ್ ಶಕತ ಸಂಭ್ರಮ ಆಚರಿಸಿದರು
–ಪಿಟಿಐ ಚಿತ್ರ
ನವದೆಹಲಿ: ವೆಸ್ಟ್ ಇಂಡೀಸ್ ತಂಡದ ಜಾನ್ ಕ್ಯಾಂಪ್‌ಬೆಲ್ ಮತ್ತು ಶಾಯ್ ಹೋಪ್ ಸೋಮವಾರವೂ ತಮ್ಮ ಹೋರಾಟವನ್ನು ಮುಂದುವರಿಸಿದರು. ಭಾರತದ ಎದುರು ಇಬ್ಬರೂ ಚೆಂದದ ಶತಕಗಳನ್ನು ದಾಖಲಿಸಿದರು. ಆದರೂ ಭಾರತ ತಂಡದವರು ತಮ್ಮ ಸಂಗ್ರಹದಲ್ಲಿದ್ದ ಪರಿಣಾಮಕಾರಿ ‘ಶಸ್ತ್ರಾಸ್ತ್ರ’ಗಳನ್ನು ಪ್ರಯೋಗಿಸುವಲ್ಲಿ ಯಶಸ್ವಿಯಾದರು.
ಆದರೂ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಸುಲಭ ಜಯ ಸಾಧಿಸುವ ಭಾರತದ ಲೆಕ್ಕಾಚಾರ ಈಡೇರಲಿಲ್ಲ. ಗುರಿ ಸಣ್ಣದಾಗಿ ಕಂಡರೂ ಅತ್ಯುತ್ಸಾಹಿಯಾಗಿರುವ ಪ್ರವಾಸಿ ಬಳಗದ ಎದುರು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತ ಗೆಲುವಿನತ್ತ ಸಾಗಬೇಕಿದೆ. ಆದ್ದರಿಂದ ಪಂದ್ಯದ ಕೊನೆಯ ದಿನವಾದ ಮಂಗಳವಾರ ಬೆಳಿಗ್ಗೆ ಮೊದಲ ಒಂದು ಗಂಟೆಯ ಆಟ ಕುತೂಹಲ ಕೆರಳಿಸಿದೆ.
ನಾಲ್ಕನೇ ದಿನದಾಟದಲ್ಲಿ 121 ರನ್‌ಗಳ ಗುರಿಯನ್ನು ಭಾರತ ಬೆನ್ನಟ್ಟಿದಾಗ 18 ಓವರ್‌ಗಳು ಉಳಿದಿದ್ದವು. ತಂಡವು ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯ ಮುಗಿಸುವ ನಿರೀಕ್ಷೆ ಇತ್ತು. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಭಾಗವಾಗಿರುವ ಈ ಪಂದ್ಯದಲ್ಲಿ ಜಯಿಸುವುದು ಮುಖ್ಯವಾಗಿರುವುದರಿಂದ ತಾಳ್ಮೆಯಿಂದ ಮುಂದುವರಿಯಲು ಕೆ.ಎಲ್. ರಾಹುಲ್ (ಬ್ಯಾಟಿಂಗ್ 25) ಮತ್ತು ಸಾಯಿ ಸುದರ್ಶನ್ (ಬ್ಯಾಟಿಂಗ್ 30) ಒತ್ತು ಕೊಟ್ಟರು. ಇದರಿಂದಾಗಿ ದಿನದಾಟದ ಮುಕ್ತಾಯಕ್ಕೆ ತಂಡವು 1 ವಿಕೆಟ್‌ಗೆ 63 ರನ್ ಗಳಿಸಿತು. ಸರಣಿಯನ್ನು 2–0ಯಿಂದ ಜಯಿಸಲು ಭಾರತಕ್ಕೆ ಇನ್ನೂ 58 ರನ್‌ಗಳ ಅವಶ್ಯಕತೆ ಇದೆ.
ಜಾನ್, ಹೋಪ್ ಶತಕ
ಭಾನುವಾರ ಸಂಜೆ ಅರ್ಧಶತಕಗಳನ್ನು ಗಳಿಸಿ ಕ್ರೀಸ್‌ನಲ್ಲಿದ್ದ ಕ್ಯಾಂಪ್‌ಬೆಲ್ ಮತ್ತು ಹೋಪ್ಸ್ ಸೋಮವಾರ ಬೆಳಿಗ್ಗೆಯೂ ತಮ್ಮ ಲಯ ಮುಂದುವರಿಸಿದರು. ಬೆಳಗಿನ ಅವಧಿಯಲ್ಲಿಯೇ ವಿಂಡೀಸ್ ಇನಿಂಗ್ಸ್‌ಗೆ ತೆರೆಯೆಳೆಯುವ ‘ಅತಿ ಆತ್ಮವಿಶ್ವಾಸ’ದಲ್ಲಿದ್ದ ಭಾರತಕ್ಕೆ ನಿರಾಸೆ ಮೂಡಿಸುವಲ್ಲಿ ಇಬ್ಬರೂ ಬ್ಯಾಟರ್‌ಗಳು ಯಶಸ್ವಿಯಾದರು.
ಕ್ಯಾಂಪ್‌ಬೆಲ್ 199 ಎಸೆತಗಳಲ್ಲಿ 115 ಮತ್ತು ಹೋಪ್ 214 ಎಸೆತಗಳಲ್ಲಿ 103 ರನ್ ಗಳಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 177 ರನ್ ಕಲೆಹಾಕಿದರು. ಅದೃಷ್ಟವೂ ಅವರಿಗೆ ಜೊತೆ ನೀಡಿತು. ಡಿಆರ್‌ಎಸ್ ರಿವೀವ್‌ಗಳೂ ಅವರ ಪರ ಬಂದವು.
ಊಟದ ವಿರಾಮಕ್ಕೂ ಮುನ್ನವೇ ಈ ಜೊತೆಯಾಟಕ್ಕೆ ತಡೆಯೊಡ್ಡುವಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ ಯಶಸ್ವಿಯಾದರು. ಕ್ಯಾಂಪ್‌ಬೆಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಜಡೇಜ ಭಾರತ ತಂಡದತ್ತ ಗೆಲುವಿನ ಅವಕಾಶ ವಾಲುವಂತೆ ಮಾಡಿದರು.
‘ರಕ್ತದ ರುಚಿ ನೋಡಿದ ಶಾರ್ಕ್’ಗಳಂತೆ ಬೌಲರ್‌ಗಳು ದಾಳಿ ನಡೆಸಿದರು. ಮಧ್ಯಮ ಕ್ರಮಾಂಕ ಕುಸಿಯಿತು. ಇದೆಲ್ಲದರ ನಡುವೆ ಜಸ್ಟಿನ್ ಗ್ರೀವ್ (ಔಟಾಗದೇ 50) ಮತ್ತು ಜೇಡನ್ ಸೀಲ್ಸ್ (32 ರನ್) ಬೀಸಾಟವಾಡಿದರು. ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಈ ಜಿದ್ದಾಜಿದ್ದಿಯಲ್ಲಿ ಚಹಾ ವಿರಾಮದ ನಂತರ ವಿಂಡೀಸ್ ಇನಿಂಗ್ಸ್‌ಗೆ ತೆರೆಬಿತ್ತು. ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ ಫಾಲೋ ಅನ್ ಪಡೆದ ನಂತರ ಆಡಿದ ಇನಿಂಗ್ಸ್‌ನಲ್ಲಿ 118.5 ಓವರ್‌ಗಳಲ್ಲಿ 390 ರನ್ ಗಳಿಸಿದ್ದು ವಿಶೇಷ.
ವೇಗಿ ಮೊಹಮ್ಮದ್ ಸಿರಾಜ್ (43ಕ್ಕೆ2), ಸ್ಪಿನ್ನರ್ ಕುಲದೀಪ್ ಯಾದವ್ (104ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (44ಕ್ಕೆ3) ವಿಂಡೀಸ್ ಬ್ಯಾಟಿಂಗ್ ಪಡೆಗೆ ಪೆಟ್ಟುಕೊಟ್ಟರು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಎರಡನೇ ಓವರ್‌ನಲ್ಲಿ ಆಘಾತ ಕಾದಿತ್ತು. ಜೊಮೆಲ್ ವಾರಿಕನ್ ಎಸೆತವನ್ನು ಹೊಡೆಯುವ ಭರದಲ್ಲಿ ಯಶಸ್ವಿ ಜೈಸ್ವಾಲ್ (8; 7ಎ, 4X2) ಅವರು ಆ್ಯಂಡರ್ಸನ್ ಫಿಲಿಪ್‌ಗೆ ಕ್ಯಾಚಿತ್ತರು. ನಂತರ ರಾಹುಲ್ ಮತ್ತು ಸಾಯಿ ಆಟ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.