ADVERTISEMENT

ಭಾರತಕ್ಕೆ ಅಜೇಯ ಓಟ ಮುಂದುವರಿಸುವ ಛಲ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌: ಆ್ಯಂಟಿಗಾದಲ್ಲಿ ಭಾರತ–ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಇಂದಿನಿಂದ

ಪಿಟಿಐ
Published 21 ಆಗಸ್ಟ್ 2019, 20:15 IST
Last Updated 21 ಆಗಸ್ಟ್ 2019, 20:15 IST
   

ನಾರ್ತ್‌ ಸೌಂಡ್, ಆ್ಯಂಟಿಗಾ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸಜ್ಜಾಗಿವೆ.

ಗುರುವಾರ ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. 2002ರಿಂದ ವಿಂಡೀಸ್ ತಂಡದ ವಿರುದ್ಧ ಭಾರತವು ಒಂದೂ ಸರಣಿ ಸೋತಿಲ್ಲ. ಅದೇ ಅಜೇಯ ಓಟವನ್ನು ಮುಂದುವರಿಸುವತ್ತ ಚಿತ್ತ ನೆಟ್ಟಿದೆ. ಈ ಪ್ರವಾಸದಲ್ಲಿ ಟ್ವೆಂಟಿ–20 ಮತ್ತು ಏಕದಿನ ಸರಣಿಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ಪಡೆಯು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ತನ್ನ ಮಡಿಲಿಗೆ ಹಾಕಿಕೊಳ್ಳುವ ಛಲದಲ್ಲಿದೆ.

ಕಣಕ್ಕಿಳಿದಾಗಲೆಲ್ಲ ದಾಖಲೆಗಳನ್ನು ನಿರ್ಮಿಸುತ್ತಿರುವ ವಿರಾಟ್ ಕೊಹ್ಲಿ ಇಲ್ಲಿ ಕೂಡ ಎರಡು ಸಾಧನೆಗಳನ್ನು ಮಾಡುವ ಹಾದಿಯಲ್ಲಿದ್ದಾರೆ. ಈ ಟೆಸ್ಟ್‌ನಲ್ಲಿ ಭಾರತವು ಗೆದ್ದರೆ ವಿರಾಟ್ ನಾಯಕತ್ವದಲ್ಲಿ 27ನೇ ಜಯವಾಗಲಿದೆ. ಇದರೊಂದಿಗೆ ವಿರಾಟ್ ಮಹೇಂದ್ರಸಿಂಗ್ ಧೋನಿ ಅವರ ದಾಖಲೆಯನ್ನು ಸರಿಗಟ್ಟುವರು. ಒಂದೊಮ್ಮೆ ಶತಕ ಬಾರಿಸಿದರೆ ನಾಯಕತ್ವದಲ್ಲಿ 19ನೇಯದ್ದಾಗಲಿದೆ. ಅದರೊಂದಿಗೆ ಅವರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆಯನ್ನು ಮೀರುವರು.‌

ADVERTISEMENT

ಮೇಲ್ನೋಟಕ್ಕೆ ಭಾರತ ತಂಡವೇ ಆತಿಥೇಯರಿಗಿಂತ ಬಲಶಾಲಿಯಾಗಿ ಕಾಣುತ್ತಿದೆ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ತಂಡವು ಬಲಾಢ್ಯವಾಗಿದೆ.

ವಿರಾಟ್ ಬಳಗದಲ್ಲಿ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಅಭ್ಯಾಸ ಪಂದ್ಯದಲ್ಲಿಯೇ ಶತಕ ಬಾರಿಸಿರುವ ಚೇತೇಶ್ವರ್ ಪೂಜಾರ, ಯುವ ಆಟಗಾರ ರಿಷಭ್ ಪಂತ್ ಮತ್ತು ಟೆಸ್ಟ್‌ನಲ್ಲಿಯೂ ಮಿಂಚುವ ಛಲದಲ್ಲಿರುವ ರೋಹಿತ್ ಶರ್ಮಾ ಇದ್ದಾರೆ. ವಿಂಡೀಸ್‌ ತಂಡವು ತನ್ನ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕೆರಿಬಿಯನ್ ನಾಡಿನ ಕೆಲವು ಉತ್ತಮ ಹಸಿರು ಪಿಚ್‌ಗಳಲ್ಲಿ ಒಂದಾಗಿರುವ ನಾರ್ತ್‌ಸೌಂಡ್‌ನಲ್ಲಿ ಆತಿಥೇಯ ಬೌಲರ್‌ಗಳ ದಾಖಲೆ ಚೆನ್ನಾಗಿದೆ. ಈಚೆಗೆ ಇಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ವಿಂಡೀಸ್ 2–1ರಿಂದ ಗೆದ್ದಿತ್ತು.

ನಾಯಕ ಜೇಸನ್ ಹೋಲ್ಟರ್, ಕೇಮರ್ ರೋಚ್ ಮತ್ತು ಶಾನನ್ ಗ್ಯಾಬ್ರಿಯಲ್ ಅವರು ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್‌ಗಳಾದ ಕ್ರೇಗ್ ಬ್ರಾಥ್‌ವೇಟ್, ಡರೆನ್ ಬ್ರಾವೊ ಕೂಡ ತಮ್ಮ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟಿಂಗ್‌ ಪಡೆಗೆ ಸವಾಲೊಡ್ಡಬಲ್ಲರು.

ಇಲ್ಲಿಯ ಪಿಚ್‌ ಮರ್ಮವನ್ನು ಅರಿತು ಬೌಲಿಂಗ್ ಮಾಡುವ ವಿಶ್ವಾಸದಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಇದ್ದಾರೆ. ಅವರಿಗೆ ಸ್ಪಿನ್ ಆಲ್‌ರೌಂಡರ್‌ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಕಊಡ ಉತ್ತಮ ಜೊತೆ ನೀಡುವ ನಿರೀಕ್ಷೆ ಇದೆ. ಆದರೆ, ಇಲ್ಲಿ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ಸಿಗುವ ಬಗ್ಗೆ ಖಚಿತವಿಲ್ಲ.

ಕನ್ನಡಿಗರಾದ ಮಯಂಕ್, ರಾಹುಲ್ ಮತ್ತು ಯುವ ವಿಕೆಟ್‌ಕೀಪರ್ ರಿಷಬ್ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಉತ್ತಮ ಅವಕಾಶವಾಗಿದೆ. ಗಾಯದಿಂದ ಚೇತರಿಸಿಕೊಂಡು ಬಂದಿರುವ ವೃದ್ಧಿಮಾನ್ ಸಹಾ ಕೂಡ ತಮ್ಮ ಸರದಿಗಾಗಿ ಇಲ್ಲಿ ಕಾಯುತ್ತಿದ್ದಾರೆ. ಆದ್ದರಿಂದ ರಿಷಭ್ ತಮ್ಮ ಆಟದಲ್ಲಿ ನಿಖರತೆ ತೋರಬೇಕಾಗಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆಟ್‌ಕೀಪರ್), ಕುಲದೀಪ್ ಯಾದವ್, ಆರ್. ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್‌ವೇಟ್, ಡರೆನ್ ಬ್ರಾವೊ, ಶಾಮ್ರಾ ಬ್ರೂಕ್ಸ್‌, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್, ರಕೀಂ ಕಾರ್ನವಾಲ್, ಶೇನ್ ಡೋರಿಚ್, ಶಾನನ್ ಗ್ಯಾಬ್ರಿಯಲ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಕೀಮೊ ಪಾಲ್, ಕೆಮರ್ ರೋಚ್.

ಪಂದ್ಯ ಆರಂಭ: ಸಂಜೆ 7

ನೇರಪ್ರಸಾರ: ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.