ADVERTISEMENT

IND vs NZ | ರೋಹಿತ್‌ ಬಳಗಕ್ಕೆ ಸರಣಿ ಜಯದ ಕನಸು

ಕ್ರಿಕೆಟ್: ಆತಿಥೇಯರಿಗೆ ತಿರುಗೇಟು ನೀಡುವ ತವಕದಲ್ಲಿ ಕಿವೀಸ್ ; ಗಿಲ್ ಮೇಲೆ ಕಣ್ಣು; ಉಮ್ರಾನ್‌ಗೆ ಅವಕಾಶ ಸಾಧ್ಯತೆ

ಪಿಟಿಐ
Published 20 ಜನವರಿ 2023, 21:37 IST
Last Updated 20 ಜನವರಿ 2023, 21:37 IST
ರಾಯಪುರ ಕ್ರೀಡಾಂಗಣದಲ್ಲಿ ಭಾರತ ತಂಡದ ಅಭ್ಯಾಸ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಢ್ ಮತ್ತು ನಾಯಕ ರೋಹಿತ್ ಶರ್ಮಾ   –ಪಿಟಿಐ ಚಿತ್ರ
ರಾಯಪುರ ಕ್ರೀಡಾಂಗಣದಲ್ಲಿ ಭಾರತ ತಂಡದ ಅಭ್ಯಾಸ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಢ್ ಮತ್ತು ನಾಯಕ ರೋಹಿತ್ ಶರ್ಮಾ   –ಪಿಟಿಐ ಚಿತ್ರ   

ರಾಯಪುರ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಶನಿವಾರ ಇಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.

ಶುಭಮನ್ ಗಿಲ್ ಅಬ್ಬರದ ದ್ವಿಶತಕದ ಬಲದಿಂದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ತಂಡವು ಸರಣಿ ಕೈವಶದ ಮೇಲೆ ಕಣ್ಣಿಟ್ಟಿದೆ. ಹೈದರಾಬಾದಿನ ಪಂದ್ಯದಲ್ಲಿ ಬೃಹತ್ ಮೊತ್ತದ ಗುರಿಯೊಡ್ಡಿದ್ದ ಭಾರತ ತಂಡವು ಸುಲಭ ಜಯ ಸಾಧಿಸಿರಲಿಲ್ಲ.

ಕಿವೀಸ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಬೇಗನೇ ನಿಯಂತ್ರಿಸಿದ್ದ ಬೌಲರ್‌ಗಳು ಮಧ್ಯಮಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿತ್ತು. 350 ರನ್‌ಗಳ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ 131 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಮಿಚೆಲ್ ಬ್ರೇಸ್‌ವೆಲ್ ಅಬ್ಬರದ ಶತಕದಿಂದಾಗಿ ಗೆಲುವಿನ ಸನಿಹ ಸಾಗಿತು. ಕೊನೆಗೂ 12 ರನ್‌ಗಳಿಂದ ಜಯಿಸುವಲ್ಲಿ ಆತಿಥೇಯರು ಸಫಲರಾದರು.

ADVERTISEMENT

ಶಾರ್ದೂಲ್ ಠಾಕೂರ್ ಮತ್ತು ಸಿರಾಜ್ ಅವರಿಬ್ಬರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ರನ್‌ಗಳನ್ನು ನಿಯಂತ್ರಿಸುವಲ್ಲಿ ಅವರೂ ಸೇರಿದಂತೆ ಆರು ಬೌಲರ್‌ಗಳು ಸಫಲರಾಗಿರಲಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಶಾರ್ದೂಲ್ ಅವರ ಬದಲಿಗೆ ಕಾಶ್ಮೀರ್ ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಲಯಕ್ಕೆ ಮರಳಿದರೆ, ಕಿವೀಸ್ ಬೌಲಿಂಗ್‌ ಪಡೆಗೆ ಕಠಿಣ ಸವಾಲಾಗಬಹುದು.

ಪಿಚ್ ಹೇಗಿದೆ: ರಾಯಪುರದ ಶಹೀದ್ ವಿರನಾರಾಯಣ ಸಿಂಗ್ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗುವ ಲಕ್ಷಣಗಳಿವೆ.

ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್. ಭರತ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ), ಫಿನ್ ಅಲೆನ್, ಡಫ್ ಬ್ರೇಸ್‌ವೆಲ್, ಮಿಚೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಲಾಕಿ ಫರ್ಗ್ಯುಸನ್, ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಹೆನ್ರಿ ಶಿಪ್ಲಿ, ಈಶ್ ಸೋಧಿ,, ಬ್ಲೇರ್ ಟಿಕ್ನರ್.

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.