ADVERTISEMENT

ಟೆಸ್ಟ್ ಸರಣಿ: ಇಂಗ್ಲೆಂಡ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಆಟಗಾರರ ನಕಾರ

ಪಿಟಿಐ
Published 3 ಜೂನ್ 2020, 19:30 IST
Last Updated 3 ಜೂನ್ 2020, 19:30 IST
ಜೇಸನ್ ಹೋಲ್ಡರ್ –ರಾಯಿಟರ್ಸ್ ಚಿತ್ರ
ಜೇಸನ್ ಹೋಲ್ಡರ್ –ರಾಯಿಟರ್ಸ್ ಚಿತ್ರ   

ಸೇಂಟ್ ಜಾನ್ಸ್, ಆಂಟಿಗಾ: ಕೊರೊನಾ ಹಾವಳಿಯ ನಡುವೆಯೇ ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಪ್ರವಾಸ ಕೈಗೊಳ್ಳಲಿರುವ ತಂಡದೊಂದಿಗೆ ತೆರಳದೇ ಇರಲು ವೆಸ್ಟ್ ಇಂಡೀಸ್‌ನ ಡಾರೆನ್ ಬ್ರಾವೊ, ಶಿಮ್ರಾನ್ ಹೆಟ್ಮೆಯರ್ ಮತ್ತು ಕೀಮೊ ಪಾಲ್ ನಿರ್ಧರಿಸಿದ್ದಾರೆ.

ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಸರಣಿಗಾಗಿ ಕ್ರಿಕೆಟ್ ವೆಸ್ಟ್‌ ಇಂಡೀಸ್ ಸಂಸ್ಥೆ (ಸಿಡಬ್ಲ್ಯುಐ) ಬುಧವಾರ 14 ಮಂದಿಯ ತಂಡವನ್ನು ಪ್ರಕಟಿಸಿದೆ. ಬ್ರಿಟನ್ ಸರ್ಕಾರದಿಂದ ಅನುಮತಿ ಸಿಕ್ಕಿದರೆ, ಇದು ಕೊರೊನಾ ಹಾವಳಿ ಆರಂಭಗೊಂಡ ನಂತರದ ಮೊದಲ ಕ್ರಿಕೆಟ್ ಸರಣಿ ಆಗಲಿದೆ.

‘ಮೂವರು ಆಟಗಾರರು ಇಂಗ್ಲೆಂಡ್‌ಗೆ ತೆರಳದೇ ಇರಲು ನಿರ್ಧರಿಸಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನು ನೀಡಲಿಲ್ಲ. ಆದರೂ ಅವರ ನಿರ್ಧಾರವನ್ನು ಗೌರವಿಸಲಾಗುವುದು’ ಎಂದು ಸಿಡಬ್ಲ್ಯುಐ ತಿಳಿಸಿದೆ.

ADVERTISEMENT

ಜೂನ್ ಎಂಟರರಂದು ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ತೆರಳಲಿದ್ದು ಏಳು ವಾರ ಅಲ್ಲಿರಲಿದೆ. ಜೈವಿಕವಾಗಿ ಭದ್ರವಾಗಿರುವ ಪರಿಸರದಲ್ಲಿ ತಂಡದ ಅಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗಿದ್ದು ಆಟಗಾರರು ಮತ್ತು ಸಿಬ್ಬಂದಿಯ ಆರೋಗ್ಯದ ಮೇಲೆ ವೈದ್ಯಕೀಯ ತಂಡ ನಿಗಾ ವಹಿಸಲಿದೆ.

‘ಜೈವಿಕ ಭದ್ರತೆಯ ಪ್ರದೇಶದಿಂದ ಹೊರಗೆ ಅಥವಾ ಒಳಗೆ ಹೋಗುವುದರ ಮೇಲೆ ನಿರ್ಬಂಧವಿರುತ್ತದೆ. ಆಯ್ಕೆ ಮಂಡಳಿಯು ಕಾಯ್ದಿರಿಸಿದ ಆಟಗಾರರ ಪಟ್ಟಿಯನ್ನೂ ಸಿದ್ಧಪಡಿಸಿರುವುದರಿಂದ ಅಂತಿಮ 11 ಆಟಗಾರರನ್ನು ಆರಿಸುವುದು ಸುಲಭವಾಗಲಿದೆ’ ಎಂದು ಸಿಡಬ್ಲ್ಯುಐ ತಿಳಿಸಿದೆ.

ಇಬ್ಬರು ಹೊಸಬರು: ಟೆಸ್ಟ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕ್ರೂಮಾ ಬಾನರ್ ಮತ್ತು ವೇಗದ ಬೌಲರ್ ಕೆಮರ್ ಹೋಲ್ಡರ್ ಅವರನ್ನು ಸೇರಿಸಲಾಗಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎಂಟು ಪಂದ್ಯಗಳಲ್ಲಿ 36 ವಿಕೆಟ್ ಕಬಳಿಸಿದ ಹೋಲ್ಡರ್ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂದೆನಿಸಿಕೊಂಡಿದ್ದರು. 2016ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಗೆದ್ದ ತಂಡದಲ್ಲೂ ಇವರು ಇದ್ದರು. ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್‌ಗೂ ಇವರಿಗೂ ಸಂಬಂಧವಿಲ್ಲ. ಟ್ವೆಂಟಿ–20 ವೆಸ್ಟ್ ಇಂಡೀಸ್ ಚಾಂಪಿಯನ್‌ಷಿಪ್‌ನಲ್ಲಿ ಬೋನರ್ 523 ರನ್ ಗಳಿಸಿದ್ದಾರೆ. 2011 ಮತ್ತು 2012ರಲ್ಲಿ ವೆಸ್ಟ್ ಇಂಡೀಸ್ ಪರ ಎರಡು ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.

ವೆಸ್ಟ್ ಇಂಡೀಸ್ ತಂಡ: ಜೇಸನ್ ಹೋಲ್ಡರ್, ಕ್ರೆಗ್ ಬ್ರಾಥ್‌ವೆಟ್, ಶಾಯಿ ಹೋಪ್‌, ಶೇನ್ ಡೌರಿಚ್, ರಾಸ್ಟನ್ ಚೇಸ್‌, ಶೆಮ್ರಾ ಬ್ರೂಕ್ಸ್‌, ರಖೀಮ್ ಕಾರ್ನ್‌ವಾಲ್, ಕ್ರೂಮಾ ಬಾನರ್, ಅಲ್ಜರಿ ಜೋಸೆಫ್‌, ಕೆಮರ್ ಹೋಲ್ಡರ್, ಜಾನ್ ಕ್ಯಾಂಪ್‌ಬೆಲ್‌, ರೇಮನ್ ರೀಫರ್, ಕೆಮರ್ ರೋಚ್‌, ಜೆರ್ಮೈನ್ ಬ್ಲ್ಯಾಕ್‌ವುಡ್. ಕಾಯ್ದಿರಿಸಿದ ಆಟಗಾರರು: ಸುನಿಲ್ ಆ್ಯಂಬ್ರಿಸ್, ಜೋಶುವಾ ಡ ಸಿಲ್ವಾ, ಶಾನನ್ ಗ್ಯಾಬ್ರಿಯೆಲ್, ಕಿಯಾನ್ ಹಾರ್ಡಿಂಗ್‌, ಕೈಲ್ ಮೈಯರ್ಸ್‌, ಪ್ರೆಸ್ಟಾನ್ ಮೆಕ್‌ಸ್ವೀನ್‌, ಮಾರ್ಕಿನೊ ಮಿಂಡ್ಲಿ, ಶೇನ್ ಮೊಸಿಲಿ, ಆ್ಯಂಡರ್ಸನ್ ಫಿಲಿಪ್, ಒಶೇನ್ ಥಾಮಸ್, ಜೊಮೆಲ್ ವಾರಿಕನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.