ADVERTISEMENT

IND vs AUS: 4 ತಿಂಗಳು ಮೊದಲೇ 1 ಏಕದಿನ, 1 ಟಿ20 ಪಂದ್ಯದ ಟಿಕೆಟ್‌ ಸೋಲ್ಡ್ ಔಟ್

ಪಿಟಿಐ
Published 26 ಜೂನ್ 2025, 11:28 IST
Last Updated 26 ಜೂನ್ 2025, 11:28 IST
   

ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವೈಟ್-ಬಾಲ್ ಕ್ರಿಕೆಟ್ ಸರಣಿಗೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ. ಎಂಟು ಪಂದ್ಯಗಳಿಂದ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಆಗಲೇ 90,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು. ಈ ಪೈಕಿ ಸಿಡ್ನಿಯ ಮೂರನೇ ಏಕದಿನ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ.

ಭಾರತವು ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದು, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 19ರಂದು ಪರ್ತ್‌ನಲ್ಲಿ ಮೊದಲ ಏಕದಿನ ಪಂದ್ಯವನ್ನಾಡುವ ಮೂಲಕ ವೈಟ್ ಬಾಲ್ ಕ್ರಿಕೆಟ್ ಸರಣಿ ಆರಂಭವಾಗಲಿದೆ.

‘ಆಸ್ಟ್ರೇಲಿಯಾ ವಿರುದ್ಧದ ಭಾರತದ ವೈಟ್ ಬಾಲ್ ಸರಣಿಯು ಕ್ರಿಕೆಟ್ ಅಭಿಮಾನಿಗಳಲ್ಲಿ, ವಿಶೇಷವಾಗಿ ಭಾರತೀಯ ವಲಸೆಗಾರರಲ್ಲಿ ಅಪಾರ ಉತ್ಸಾಹವನ್ನು ಉಂಟುಮಾಡಿದೆ" ಎಂದು ಸಿಎ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಸಿಡ್ನಿ ಏಕದಿನ ಮತ್ತು ಮನುಕಾ ಓವಲ್ (ಕ್ಯಾನ್‌ಬೆರಾ) ಟಿ20 ಕ್ರಿಕೆಟ್ ಪಂದ್ಯದ ಟಿಕೆಟ್‌ಗಳು ನಾಲ್ಕು ತಿಂಗಳು ಮೊದಲೇ ಮಾರಾಟವಾಗಿವೆ. ಇದು ಈ ಪಂದ್ಯಗಳಿಗೆ ಭಾರಿ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ, ಮೆಲ್ಬರ್ನ್ ಟಿ20 ಮತ್ತು ಗಬ್ಬಾ ಟಿ20 ಪಂದ್ಯಗಳಿಗೂ ಕ್ರೇಜ್ ಹೆಚ್ಚಿದೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಆ್ಯಷಸ್‌ಗಾಗಿ ದಾಖಲೆಯ ಟಿಕೆಟ್ ಮಾರಾಟದ ನಂತರ, ವೈಟ್ ಬಾಲ್ ಕ್ರಿಕೆಟ್ ಪಂದ್ಯಗಳಿಗೂ ಹೆಚ್ಚಿನ ಬೇಡಿಕೆ ಇದೆ. ಟಿಕೆಟ್ ಮಾರಾಟ ಆರಂಭವಾಗಿ ಕೇವಲ ಎರಡು ವಾರಗಳಲ್ಲಿ ಎಂಟು ಪಂದ್ಯಗಳಿಗೆ 90,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಅದು ತಿಳಿಸಿದೆ.

ಈವರೆಗೆ ಮಾರಾಟವಾದ ಟಿಕೆಟ್‌ಗಳಲ್ಲಿ ಶೇ 16ಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಭಾರತೀಯ ಅಭಿಮಾನಿ ಕ್ಲಬ್‌ಗಳು ಖರೀದಿಸಿವೆ ಎಂದು ಸಿಎ ಹೇಳಿದೆ.

‘ಆಸ್ಟ್ರೇಲಿಯಾದಲ್ಲಿ ‘ಭಾರತ್ ಆರ್ಮಿ’ ಅತ್ಯಂತ ಸಕ್ರಿಯ ಅಭಿಮಾನಿ ಕ್ಲಬ್‌ಗಳಲ್ಲಿ ಒಂದಾಗಿದೆ. ಇದು 2,400 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಖರೀದಿಸಿದೆ. ‘ಫ್ಯಾನ್ಸ್ ಇಂಡಿಯಾ’ಕೂಡ 1,400ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಗಮನಾರ್ಹ ಉತ್ಸಾಹವನ್ನು ತೋರಿಸಿದೆ’ಎಂದು ಅದು ಹೇಳಿದೆ.

ಅಗರ್ವಾಲ್ ಸಮುದಾಯದ ‘ಬ್ರಿಸ್ಸಿ ಬನಿಯಾಸ್‌’ ಕ್ಲಬ್‌ನ ಅಮಿತ್ ಗೋಯಲ್ ಅವರು ಗಬ್ಬಾ ಟಿ 20 ಪಂದ್ಯದ 880 ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಗೋಲ್ಡ್ ಕೋಸ್ಟ್ ಮತ್ತು ಪಕ್ಕಾ ಲೋಕಲ್‌ ಕ್ಲಬ್‌ಗಳು ಗೋಲ್ಡ್ ಕೋಸ್ಟ್ ಮತ್ತು ಎಂಸಿಜಿ ಟಿ20 ಪಂದ್ಯಗಳ ತಲಾ 500ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಖರೀದಿಸಿವೆ’ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.