ADVERTISEMENT

WI vs Aus | ಎರಡನೇ ಅತಿ ವೇಗದ ಶತಕ ಸಿಡಿಸಿದ ಟಿಮ್ ಡೇವಿಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2025, 5:29 IST
Last Updated 26 ಜುಲೈ 2025, 5:29 IST
   

ಬಾಸ್ಸೆಟೆರೆ: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ–20 ಸರಣಿಯ ಮೂರನೇ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಟಿಮ್ ಡೇವಿಡ್ ಅವರು ಶತಕ ಬಾರಿಸಿದರು. ಇದು ಅಂತರರಾಷ್ಟೀಯ ಟಿ–20 ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದ ಶತಕವಾಗಿದೆ.

ಟಿಮ್ ಡೇವಿಡ್ ಅವರು ಆಸ್ಟ್ರೇಲಿಯಾ ಪರ ಅತಿ ವೇಗದ ಟಿ–20 ಶತಕ ದಾಖಲಿಸಿದರು.

ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡವು ಶಾಯ್ ಹೋಪ್‌ ಅವರ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 214 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ADVERTISEMENT

ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಟಿಮ್ ಡೇವಿಡ್, ಕೇವಲ 37 ಎಸೆತಗಳಲ್ಲಿ 11 ಸಿಕ್ಸರ್‌, 6 ಬೌಂಡರಿ ಸಹಿತ ಅಜೇಯ 102 ರನ್‌ಗಳಿಸಿದರು. ಅವರ ಶತಕದ ನೆರವಿನಿಂದ 215 ರನ್‌ಗಳ ಬೃಹತ್‌ ಗುರಿಯನ್ನು 16.1 ಓವರ್‌ಗಳಲ್ಲಿ ತಲುಪಿದ ಆಸ್ಟ್ರೇಲಿಯಾ, ಐದು ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.

ಐದು ಪಂದ್ಯಗಳ ಟಿ–20 ಸರಣಿಯಲ್ಲಿ ಆಸ್ಟ್ರೇಲಿಯಾವು 3–0 ಮುನ್ನಡೆಯಲ್ಲಿದೆ. ಸರಣಿ ವಶಪಡಿಸಿಕೊಂಡಿದ್ದು, ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ.

ಅಂತರರಾಷ್ಟೀಯ ಟಿ–20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆಯು ಡೆವಿಡ್‌ ಮಿಲ್ಲರ್‌ ಹಾಗೂ ರೋಹಿತ್‌ ಶರ್ಮಾ ಅವರ ಹೆಸರಿನಲ್ಲಿದೆ. ಡೆವಿಡ್‌ ಮಿಲ್ಲರ್‌ ಅವರು ಬಾಂಗ್ಲಾದೇಶದ ವಿರುದ್ದ ಹಾಗೂ ರೋಹಿತ್‌ ಶರ್ಮಾ ಅವರು ಶ್ರೀಲಂಕಾ ವಿರುದ್ದ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಟಿಮ್ ಡೇವಿಡ್ ಅವರು 37 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಭಾರತದ ಅಭಿಷೇಕ್ ಶರ್ಮಾ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಅವರು ಇಂಗ್ಲೆಂಡ್‌ ವಿರುದ್ದ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.