ADVERTISEMENT

ಮಹಿಳಾ ಉದ್ಯೋಗಿಗೆ ಅಶ್ಲೀಲ ಸಂದೇಶ: ಟೆಸ್ಟ್ ತಂಡದ ನಾಯಕತ್ವ ತೊರೆದ ಟಿಮ್ ಪೇನ್

ಪಿಟಿಐ
Published 19 ನವೆಂಬರ್ 2021, 9:43 IST
Last Updated 19 ನವೆಂಬರ್ 2021, 9:43 IST
ಟಿಮ್ ಪೇನ್
ಟಿಮ್ ಪೇನ್   

ಹೊಬರ್ಟ್: ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ತನಿಖೆಗೆ ಒಳಪಟ್ಟ ಬಳಿಕ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವವನ್ನು ಟಿಮ್ ಪೇನ್ತೊರೆದಿದ್ದಾರೆ.

2017ರಲ್ಲಿ ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಘಟನೆ ನಡೆದಿತ್ತು. ಆ ಸಂದರ್ಭ ನಡೆದ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ತಸ್ಮೇನಿಯಾಗಳ ಜಂಟಿ ತನಿಖೆಯಲ್ಲಿ ಪೇನ್‌ಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಸಾಂಪ್ರದಾಯಿಕ ಎದುರಾಳಿಯಾದ ಇಂಗ್ಲೆಂಡ್ ವಿರುದ್ಧ ಆ್ಯಷಸ್ ಸರಣಿಗೆ ಕೆಲವೇ ವಾರಗಳು ಬಾಕಿ ಇರುವಾಗ ನಡೆದಿರುವ ಈ ಬೆಳವಣಿಗೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಭಾರಿ ಹಿನ್ನಡೆಯಾಗಿದೆ. ಡಿಸೆಂಬರ್ 8ರಿಂದ ಬ್ರಿಸ್ಬೇನ್‌ನಲ್ಲಿ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ADVERTISEMENT

‘ಈ ದಿನ ಆಸ್ಟ್ರೇಲಿಯಾದ ಪುರುಷರ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ತೊರೆಯುವ ನನ್ನ ನಿರ್ಧಾರವನ್ನು ಪ್ರಕಟಿಸುತ್ತಿದ್ದೇನೆ. ಇದು ಊಹೆಗೆ ಮೀರಿದ ಕಠಿಣ ನಿರ್ಧಾರ. ಆದರೆ, ನನಗೆ, ಕುಟುಂಬಕ್ಕೆ ಮತ್ತು ಕ್ರಿಕೆಟ್‌ ದೃಷ್ಟಿಯಿಂದ ಸರಿಯಾದ ನಿರ್ಣಯ’ಎಂದಿದ್ದಾರೆ.

'ಹತ್ತಿರಹತ್ತಿರ 4 ವರ್ಷಗಳ ಹಿಂದೆ ಅಂದಿನ ನನ್ನ ಸಹೋದ್ಯೋಗಿಗೆ ಮೆಸೇಜ್ ಕಳುಹಿಸಿದ್ದೆ, ಆ ಸಂದರ್ಭದಲ್ಲಿ ಅದಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸಿದ್ದೆ. ಇಂದೂ ಸಹ ಅದನ್ನೇ ಮಾಡಿರುವೆ. ಈ ಬಗ್ಗೆ ನನ್ನ ಪತ್ನಿ ಮತ್ತು ಕುಟುಂಬದ ಜೊತೆ ಮಾತನಾಡಿರುವೆ. ನನ್ನನ್ನು ಕ್ಷಮಿಸಿ ಬೆಂಬಲಿಸಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಕ್ರಿಕೆಟ್ ತಸ್ಮೇನಿಯಾದ ಮಹಿಳಾ ಉದ್ಯೋಗಿಯೊಬ್ಬರಿಗೆ ಟಿಮ್ ಪೇನ್, ಗ್ರಾಫಿಕ್ಸ್‌ನಿಂದ ಕೂಡಿದ ಲೈಂಗಿಕ ಕಾಮೆಂಟ್‌ಗಳ ಜೊತೆಗೆ ಅವರ ಜನನಾಂಗಗಳ ಅಶ್ಲೀಲ ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ಕಳುಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.