ADVERTISEMENT

IND vs WI T20I: ಯುವ ಆಟಗಾರರಿಗೆ ‘ಪರೀಕ್ಷೆ’

ವೆಸ್ಟ್ ಇಂಡೀಸ್ ಎದುರು ಟಿ20 ಸರಣಿ ಆರಂಭ ಇಂದು; ವಿಶ್ವಕಪ್ ಟೂರ್ನಿಗೆ ಪೂರ್ವಾಭ್ಯಾಸ

ಪಿಟಿಐ
Published 15 ಫೆಬ್ರುವರಿ 2022, 19:45 IST
Last Updated 15 ಫೆಬ್ರುವರಿ 2022, 19:45 IST
ಟೀಮ್ ಇಂಡಿಯಾ
ಟೀಮ್ ಇಂಡಿಯಾ   

ಕೋಲ್ಕತ್ತ: ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಲಿರುವ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತ ತಂಡದ ‘ಪೂರ್ವಾಭ್ಯಾಸ’ ಬುಧವಾರ ಆರಂಭವಾಗಲಿದೆ.

ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗದಲ್ಲಿರುವ ಯುವ ಪ್ರತಿಭೆಗಳಿಗೆ ಈ ಸರಣಿಯು ‘ಪರೀಕ್ಷೆ’ಯ ಕಣವಾಗಲಿದೆ. ಈಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಹರಾಜಿನಲ್ಲಿ ದೊಡ್ಡ ಮೊತ್ತ ಗಳಿಸಿದ ಹತ್ತು ಆಟಗಾರರು ಈ ತಂಡದಲ್ಲಿದ್ದಾರೆ.

ಅದರಲ್ಲಿ ₹15.25 ಕೋಟಿ ಗಳಿಸಿದ ಇಶಾನ್ ಕಿಶನ್, ₹ 12.5 ಕೋಟಿ, ಹರ್ಷಲ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ತಲಾ ₹ 10.75 ಕೋಟಿ ಪ್ರಮುಖರಾಗಿದ್ದಾರೆ. ಇವರಿಗೆ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.ಏಕದಿನ ಸರಣಿಯಲ್ಲಿ ಜಯಭೇರಿ ಬಾರಿಸಿರುವ ಆತಿಥೇಯ ಬಳಗವು ಆತ್ಮವಿಶ್ವಾಸದಲ್ಲಿದೆ. ಆ ಸರಣಿಯಲ್ಲಿ ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಲು ಇಶಾನ್, ರಿಷಭ್ ಮತ್ತು ಶಿಖರ್ ಧವನ್ ಅವರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಲಾಗಿತ್ತು. ಕೆ.ಎಲ್. ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು.

ADVERTISEMENT

ಟಿ20 ಸರಣಿಯಲ್ಲಿ ಯುವ ಬ್ಯಾಟರ್‌ ಋತುರಾಜ್ ಗಾಯಕವಾಡ್, ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅಥವಾ ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಸಿಗಬಹುದು.

ಕಳೆದ ಎರಡು ವರ್ಷಗಳಿಂದ ಯಾವುದೇ ಮಾದರಿಯಲ್ಲಿಯೂ ವಿರಾಟ್ ಶತಕ ಗಳಿಸಿಲ್ಲ. ಏಕದಿನ ಸರಣಿಯಲ್ಲಿ ಕೂಡ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಆದ್ದರಿಂದ ಅವರಿಗೂ ತಮ್ಮ ಫಾರ್ಮ್ ಕಂಡುಕೊಳ್ಳಲು ಇದು ಪ್ರಮುಖ ಸರಣಿಯಾಗಿದೆ.

ಮಧ್ಯಮಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮೇಲೆ ವಿಶ್ವಾಸವಿಡಬಹುದು. ರಿಷಭ್ ಕೂಡ ಮಹತ್ವದ ಇನಿಂಗ್ಸ್ ಆಡುವಲ್ಲಿ ಸಮರ್ಥರು. ಶ್ರೇಯಸ್ ಕೂಡ ಇರುವುದರಿಂದ ಬಲಿಷ್ಠ ಲೈನ್ ಅಪ್ ಎಂದು ಹೇಳಬಹುದು.

ಇಬ್ಬರು ಸ್ಪಿನ್ನರ್ ಮತ್ತು ಮೂವರು ಮಧ್ಯಮವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಶಾರ್ದೂಲ್, ದೀಪಕ್ ಮತ್ತು ಹರ್ಷಲ್ ಉತ್ತಮ ಬ್ಯಾಟಿಂಗ್ ಕೂಡ ಮಾಡಬಲ್ಲರು. ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಲು ಸಿದ್ಧವಾಗಿರುವ ಸ್ಪಿನ್ನರ್ ರವಿ ಬಿಷ್ಣೋಯಿ ವಿಂಡೀಸ್ ಬ್ಯಾಟಿಂಗ್ ಪಡೆಗೆ ಹೇಗೆ ಸವಾಲೊಡ್ಡುವರೆಂಬ ಕುತೂಹಲ ಕೆರಳಿದೆ.ವಿಂಡೀಸ್ ತಂಡವು ಟಿ20 ಕ್ರಿಕೆಟ್‌ನಲ್ಲಿ ಅಚ್ಚರಿ ಫಲಿತಾಂಶ ನೀಡುವುದು ಪರಿಪಾಠ. ನಾಯಕ ಪೊಲಾರ್ಡ್ ಮತ್ತು ನಿಕೊಲಸ್ ಪೂರನ್ ಅವರ ಆಟ ಮಹತ್ವದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.