ADVERTISEMENT

ತಮಿಳುನಾಡು ಪ್ರೀಮಿಯರ್‌ ಲೀಗ್ ಕ್ರಿಕೆಟ್‌ ಟೂರ್ನಿ‌ ಮತ್ತೆ ಮುಂದಕ್ಕೆ

ಪಿಟಿಐ
Published 1 ಆಗಸ್ಟ್ 2020, 13:17 IST
Last Updated 1 ಆಗಸ್ಟ್ 2020, 13:17 IST
ಆರ್‌.ಅಶ್ವಿನ್‌
ಆರ್‌.ಅಶ್ವಿನ್‌   

ಚೆನ್ನೈ: ಐದನೇ ಆವೃತ್ತಿಯ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯು ಕೋವಿಡ್‌ ಹಿನ್ನೆಲೆಯಲ್ಲಿ ಎರಡನೇ ಬಾರಿ ಮುಂದೂಡಿಕೆಯಾಗಿದೆ. ತಮಿಳುನಾಡು ಕ್ರಿಕೆಟ್‌ ಸಂಸ್ಥೆಯು (ಟಿಎನ್‌ಸಿಎ) ಈ ಟೂರ್ನಿಯನ್ನು ಈ ವರ್ಷದ ನವೆಂಬರ್‌ ಅಥವಾ 2021ರ ಮಾರ್ಚ್‌ನಲ್ಲಿ ಆಯೋಜಿಸುವ ವಿಶ್ವಾಸವನ್ನು ಹೊಂದಿದೆ.

ಈ ಮೊದಲು ಜೂನ್‌ 10ರಿಂದ ಜುಲೈ 12ರವರೆಗೆ ಈ ಟ್ವೆಂಟಿ–20 ಲೀಗ್‌ ನಿಗದಿಯಾಗಿತ್ತು. ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳಲ್ಲಿ ಏರಿಕೆಯಾದ ಕಾರಣ ಟಿಎನ್‌ಸಿಎ ಮೇ ತಿಂಗಳಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು.

‘ಜುಲೈ ತಿಂಗಳಾಂತ್ಯದಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಸಂಸ್ಥೆಯು ಯೋಜಿಸಿತ್ತು. ಆದರೆ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರದ ಕಾರಣ ಸಾಧ್ಯವಾಗಿರಲಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಯಲ್ಲಿ ಇಲ್ಲದ ಕಾರಣ ಟೂರ್ನಿಯನ್ನುಸದ್ಯ ಆಯೋಜಿಸುವುದಕ್ಕೆ ಸಾಧ್ಯವಾಗುತ್ತಿಲ್ಲ‘ ಎಂದು ಟಿಎನ್‌ಸಿಎ ಗೌರವ ಕಾರ್ಯದರ್ಶಿ ಆರ್‌.ಎಸ್‌.ರಾಮಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ವರ್ಷದ ನವೆಂಬರ್ ಅಥವಾ ಮುಂದಿನ ವರ್ಷದ ಮಾರ್ಚ್‌ನಲ್ಲಿ ಲೀಗ್‌ಅನ್ನು ಆಯೋಜಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು‘ ಎಂದು ರಾಮಸ್ವಾಮಿ ಹೇಳಿದ್ದಾರೆ.

ತಮಿಳುನಾಡಿನ ಪ್ರಮುಖ ಆಟಗಾರರಾದ ಆರ್‌.ಅಶ್ವಿನ್‌, ದಿನೇಶ್‌ ಕಾರ್ತಿಕ್‌, ವಿಜಯಶಂಕರ್‌, ಮುರಳಿ ವಿಜಯ್‌ ಮುಂತಾದವರು ಟಿಎನ್‌ಪಿಎಲ್‌ನಲ್ಲಿ ಕಣಕ್ಕಿಳಿಯುತ್ತಾರೆ. ಯುವ ಆಟಗಾರರಾದ ವರುಣ್‌ ಚಕ್ರವರ್ತಿ ಹಾಗೂ ಸಾಯಿ ಕಿಶೋರ್‌ ಅವರಂತಹ ಪ್ರತಿಭೆಗಳು ಈ ಲೀಗ್‌ ಮೂಲಕ ಬೆಳಕಿಗೆ ಬಂದಿದ್ದಾರೆ.

ತಮಿಳುನಾಡಿನಲ್ಲಿ ಇದುವರೆಗೆ 2.4 ಲಕ್ಷಕ್ಕಿಂತ ಅಧಿಕ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ. 3,935 ಮಂದಿ ಸಾವನ್ನಪ್ಪಿದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.