ADVERTISEMENT

ಇಂಗ್ಲೆಂಡ್‌ ಎದುರಿನ ಟೆಸ್ಟ್ ಪಂದ್ಯ: ಕೊಹ್ಲಿ ಶತಕ, ಇಂಗ್ಲೆಂಡ್‌ಗೆ ನಡುಕ

ಚೇತೇಶ್ವರ್ ಪೂಜಾರ ಅರ್ಧಶತಕ; ಭಾರತಕ್ಕೆ ಭಾರಿ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2018, 18:42 IST
Last Updated 20 ಆಗಸ್ಟ್ 2018, 18:42 IST
ಶತಕ ದಾಖಲಿಸಿದ ನಂತರ ವಿರಾಟ್‌ ಕೊಹ್ಲಿ ಅವರು ಸಂಭ್ರಮಿಸಿದರು –ರಾಯಿಟರ್ಸ್‌ ಚಿತ್ರ
ಶತಕ ದಾಖಲಿಸಿದ ನಂತರ ವಿರಾಟ್‌ ಕೊಹ್ಲಿ ಅವರು ಸಂಭ್ರಮಿಸಿದರು –ರಾಯಿಟರ್ಸ್‌ ಚಿತ್ರ   

ನಾಟಿಂಗಂ: ಚೇತೇಶ್ವರ ಪೂಜಾರ (72; 208 ಎ, 9 ಬೌಂ) ಅವರೊಂದಿಗೆ ಶತಕದ ಜೊತೆಯಾಟ ಆಡಿದ ನಾಯಕ ವಿರಾಟ್ ಕೊಹ್ಲಿ (103; 197 ಎಸೆತ, 10 ಬೌಂಡರಿ) ವೈಯಕ್ತಿಕವಾಗಿ ಮೂರಂಕಿ ಮೊತ್ತ ಗಳಿಸಿ ಸಂಭ್ರಮಿಸಿದರು. ಇವರಿಬ್ಬರ ಮೋಹಕ ಜೊತೆಯಾಟದ ನಂತರ ಹಾರ್ದಿಕ್ ಪಾಂಡ್ಯ (ಔಟಾಗದೆ 52; 52 ಎ, 1 ಸಿ, 7 ಬೌಂ) ಅಬ್ಬರಿಸಿದರು. ಹೀಗಾಗಿ ಭಾರತ ತಂಡ ಭಾರಿ ಮೊತ್ತದ ಮುನ್ನಡೆ ಗಳಿಸಿತು.

ಟ್ರೆಂಟ್ ಬ್ರಿಜ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‍ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನ ಈ ಮೂವರ ಮೋಹಕ ಬ್ಯಾಟಿಂಗ್ ನೆರವಿನಿಂದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 352 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಒಟ್ಟಾರೆ 520 ರನ್‌ಗಳ ಮುನ್ನಡೆ ಗಳಿಸಿತು.

ಗುರಿ ಬೆನ್ನತ್ತಿರುವ ಆತಿಥೇಯರು ದಿನದಾಟದ ಅಂತ್ಯಕ್ಕೆ 23 ರನ್‌ ಗಳಿಸಿದ್ದಾರೆ. ಗೆಲ್ಲಬೇಕಾದರೆ ತಂಡ ಇನ್ನೂ 498 ರನ್ ಗಳಿಸಬೇಕಾಗಿದೆ.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 329 ರನ್ ಗಳಿಸಿದ್ದ ಭಾರತ ಭಾನುವಾರ ಆತಿಥೇಯರನ್ನು 161 ರನ್‌ಗಳಿಗೆ ಕೆಡವಿತ್ತು. ದಿನದಾಟದ ಮುಕ್ತಾಯಕ್ಕೆ 31 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 124 ರನ್‌ ಗಳಿಸಿತ್ತು. ತಲಾ 33 ಮತ್ತು ಎಂಟು ರನ್‌ ಗಳಿಸಿದ್ದ ಪೂಜಾರ ಮತ್ತು ಕೊಹ್ಲಿ ಮೂರನೇ ದಿನವಾದ ಸೋಮವಾರ ನಿರಾತಂಕವಾಗಿ ಬ್ಯಾಟ್‌ ಬೀಸಿದರು.

ಇಂಗ್ಲೆಂಡ್‌ ತಂಡದ ವೇಗ ಮತ್ತು ಸ್ಪಿನ್‌ ಬೌಲರ್‌ಗಳಿಗೆ ಇವರಿಬ್ಬರ ಚಿತ್ತ ಕದಲಿಸಲು ಆಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಮೂರು ರನ್‌ಗಳಿಂದ ಶತಕ ವಂಚಿತರಾಗಿದ್ದ ಕೊಹ್ಲಿ ಸೋಮವಾರ 10 ಬೌಂಡರಿಗಳೊಂದಿಗೆ ಮೂರಂಕಿ ಮೊತ್ತ ದಾಟಿದರು.

ಅರ್ಧಶತಕ ಪೂರೈಸಿದ ಪೂಜಾರ ಭೋಜನ ವಿರಾಮದ ನಂತರ ಔಟಾದರು. ಕೊಹ್ಲಿ ಅವರ ಬ್ಯಾಟಿಂಗ್ ವೈಭವ ನಂತರವೂ ಮುಂದುವರಿಯಿತು. ಚಹಾ ವಿರಾಮದ ನಂತರ ತಾವೆದುರಿಸಿದ 191ನೇ ಎಸೆತದಲ್ಲಿ ಶತಕ ಪೂರೈಸಿದರು. ಸ್ವಲ್ಪ ಹೊತ್ತಿನಲ್ಲೇ ವಿಕೆಟ್ ಕಳೆದುಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಐದು ವಿಕೆಟ್ ಉರುಳಿಸಿ ಮಿಂಚಿದ್ದ ಪಾಂಡ್ಯ ಅರ್ಧಶತಕ ಪೂರೈಸುತ್ತಿದ್ದಂತೆ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.