ADVERTISEMENT

ಕೋವಿಡ್‌ ಬಿಕ್ಕಟ್ಟು: ಭಾರತ ಎರಡು ತಂಡಗಳಾಗಿ ಆಡುವುದು ಮುಂದುವರಿಯಬಹುದು

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಖಜಾಂಚಿ ಅರುಣ್ ಧುಮಾಲ್‌ ಅಭಿಪ್ರಾಯ

ಪಿಟಿಐ
Published 16 ಜೂನ್ 2021, 14:37 IST
Last Updated 16 ಜೂನ್ 2021, 14:37 IST
ಅರುಣ್ ಧುಮಾಲ್‌–ಎಎಫ್‌ಪಿ ಚಿತ್ರ
ಅರುಣ್ ಧುಮಾಲ್‌–ಎಎಫ್‌ಪಿ ಚಿತ್ರ   

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಭಾರತವು ಎರಡು ವಿಭಿನ್ನ ತಂಡಗಳನ್ನು ಭಿನ್ನ ತಾಣಗಳಲ್ಲಿ ಕಣಕ್ಕಿಳಿಸುವುದು ಮುಂದುವರಿಯಬಹುದು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಖಜಾಂಚಿ ಅರುಣ್‌ ಧುಮಾಲ್‌ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದಾಗಿ ದ್ವಿಪಕ್ಷೀಯ ಕ್ರಿಕೆಟ್‌ಗೆಹೆಚ್ಚು ಅವಕಾಶ ನೀಡಿದಂತಾಗುತ್ತದೆ ಮತ್ತು ಬಯೋ-ಬಬಲ್ ಆಯಾಸದಿಂದ ಎಲ್ಲ ಮಾದರಿಯ ಆಟಗಾರರಿಗೆ ಸ್ವಲ್ಪ ಬಿಡುವು ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ವಿರಾಟ್-ಕೊಹ್ಲಿ ನೇತೃತ್ವದ ಪ್ರಮುಖ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗಾಗಿ ಸದ್ಯ ಇಂಗ್ಲೆಂಡ್‌ನಲ್ಲಿದೆ. ಶಿಖರ್ ಧವನ್ ನಾಯಕತ್ವದ ಇನ್ನೊಂದು ತಂಡವು ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗಾಗಿ ಆ ದೇಶಕ್ಕೆ ತೆರಳಲಿದೆ. ಭಾರತದ ಕ್ರಿಕೆಟ್‌ನಲ್ಲಿ ಇದೊಂದು ಅಪರೂಪದ ನಿದರ್ಶನವಾಗಿದೆ.

ADVERTISEMENT

ಆಟಗಾರರಿಗೆ ಬಬಲ್ ಜೀವನದಿಂದ ಸ್ವಲ್ಪ ವಿರಾಮ ನೀಡುವ ಅಗತ್ಯತೆಯ ಬಗ್ಗೆ ಕೊಹ್ಲಿ ಈಗಾಗಲೇ ಮಾತನಾಡಿದ್ದಾರೆ.

‘ಮುಖ್ಯ ತಂಡದ ಆಟಗಾರರು ಬೇರೆಡೆ ಆಡುತ್ತಿರುವಾಗ ಅಥವಾ ವಿರಾಮ ಅಗತ್ಯವಿದ್ದಾಗ ಭಾರತದ ಯುವ ತಂಡವು ಮತ್ತೊಂದು ಸೀಮಿತ ಓವರ್‌ಗಳ ಟೂರ್ನಿಯಲ್ಲಿ ಆಡುವ ಸಾಧ್ಯತೆ ಖಂಡಿತ ಇದೆ‘ ಎಂದು ಧುಮಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಎರಡು ತಂಡಗಳಾಗಿ ಆಡುವ ಈ ಪ್ರಕ್ರಿಯೆಯು ಭಾರತದ ಕಿರಿಯರ ಪಡೆಯು ಬಲಿಷ್ಠವಾಗಿರುವುದನ್ನು ಸೂಚಿಸುತ್ತದೆ ಮತ್ತು ಹೆಚ್ಚಿನ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವ ಮೂಲಕ ಕೋವಿಡ್‌ನಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ಕ್ರಿಕೆಟ್‌ ಮಂಡಳಿಗಳಿಗೆ ಸಹಾಯ ಮಾಡಲು ನಮಗೆ ಅವಕಾಶವಾಗುತ್ತದೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.

‘ದೇಶದಲ್ಲಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಎಲ್ಲ ಅಗತ್ಯ ಕ್ರಮಗಳನ್ನು ಬಿಸಿಸಿಐ ತೆಗೆದುಕೊಳ್ಳುತ್ತಿದೆ‘ ಎಂದು ಇದೇ ವೇಳೆ ಧುಮಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.