ADVERTISEMENT

ಯುವ ವಿಶ್ವಕಪ್ ಕ್ರಿಕೆಟ್: ಮುಯ್ಯಿ ತೀರಿಸಿಕೊಳ್ಳುವತ್ತ ಭಾರತ ಚಿತ್ತ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 13:40 IST
Last Updated 31 ಜನವರಿ 2026, 13:40 IST
ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ   

ಬುಲವಾಯೊ: ಐದು ಸಲದ ಚಾಂಪಿಯನ್ ಭಾರತ ಯುವ ತಂಡವು ಭಾನುವಾರ 19 ವರ್ಷದೊಳಗಿನವರ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿ ಸೂಪರ್ ಸಿಕ್ಸ್‌ ಪಂದ್ಯದಲ್ಲಿ ‘ಬದ್ಧ ಪ್ರತಿಸ್ಪರ್ಧಿ’ ಪಾಕಿಸ್ತಾನ ಯುವಪಡೆಯನ್ನು ಎದುರಿಸಲಿದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಂಡದೊಂದಿಗೆ ಚುಟುಕು ಸಂಭಾಷಣೆ ನಡೆಸಿದ್ದಾರೆ. ಅವರ ಸಲಹೆಗಳಿಂದಾಗಿ ಯುವ  ಆಟಗಾರರಲ್ಲಿ ಹೊಸ ಹುರುಪು ಮಾಡಿದೆ. 

ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ 19 ವರ್ಷದೊಳಗಿನವರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕ್ ಎದುರು ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ಭಾರತ ಇದೆ. ಅದೇ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಭಾರತವು ಪಾಕ್ ತಂಡವನ್ನು 90 ರನ್‌ಗಳಿಂದ ಮಣಿಸಿತ್ತು. 

ADVERTISEMENT

ಪಾಕ್ ಆಟಗಾರರ ಹಸ್ತಲಾಘವ ಮಾಡದಿರುವ ತನ್ನ ನಿಲುವನ್ನು ಭಾರತ ತಂಡವು ಈ ಪಂದ್ಯದಲ್ಲಿಯೂ ಮುಂದುವರಿಸಲಿದೆ. 

ಆಯುಷ್ ಮ್ಹಾತ್ರೆ ನಾಯಕತ್ವದ ತಂಡವು ಈ ಟೂರ್ನಿಯಲ್ಲಿ ಇದುವರೆಗೆ ಉತ್ತಮವಾಗಿ ಆಡಿದೆ. ಅಮೆರಿಕ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳ ಎದುರು ಗುಂಪು ಹಂತದಲ್ಲಿ ಗೆಲುವು ಸಾಧಿಸಿತ್ತು. ಸೂಪರ್ ಸಿಕ್ಸ್‌ ಹಂತದ ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ಎದುರು 204 ರನ್‌ಗಳಿಂದ ಗೆದ್ದಿತ್ತು. ಆದರೆ ಪಾಕ್ ತಂಡದಲ್ಲಿ ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯದ ಆಟಗಾರರು ಇದ್ದಾರೆ.

ಭಾರತ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಅಭಿಗ್ಯಾನ್ ಕುಂಡು (ನಾಲ್ಕು ಪಂದ್ಯಗಳಿಂದ 183 ರನ್), ವೈಭವ್ ಸೂರ್ಯವಂಶಿ (ನಾಲ್ಕು ಪಂದ್ಯಗಳಿಂದ 166 ರನ್), ವಿಹಾನ್ ಮಲ್ಹೋತ್ರಾ (151 ರನ್) ಅಮೋಘ ಲಯದಲ್ಲಿದ್ದಾರೆ.  ವಿಹಾನ್ ಅವರು ಜಿಂಬಾಬ್ವೆ ಎದುರು ಅಜೇಯ ಶತಕ ಗಳಿಸಿದ್ದರು. 

ಬೌಲಿಂಗ್ ವಿಭಾಗದಲ್ಲಿ ಬಲಗೈ ಮಧ್ಯಮವೇಗಿ ಹೆನಿಲ್ ಪಟೇಲ್ (10 ವಿಕೆಟ್) ಮತ್ತು ಎಡಗೈ ವೇಗಿ ಉಧವ್‌ ಮೋಹನ್ (3) ಅವರು ಪ್ರಮುಖರಾಗಿದ್ದಾರೆ. ಆಯುಷ್ ಕೂಡ ತಮ್ಮ ಆಫ್‌ಬ್ರೇಕ್ ಬೌಲಿಂಗ್ ಮೂಲಕ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದರು. 

ಇನ್ನೊಂದೆಡೆ; ಪಾಕಿಸ್ತಾನ ತಂಡವು ಗುಂಪು ಹಂತದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋತಿತ್ತು. ನಂತರದ ಎರಡು ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ಎದುರು ಗೆದ್ದು ಸೂಪರ್ ಸಿಕ್ಸ್ ಪ್ರವೇಶಿಸಿದೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಅದರಿಂದಾಗಿ ಪಾಕ್ ಆಟಗಾರರು ಅಪಾರ ಆತ್ಮವಿಶ್ವಾಸದಲ್ಲಿದ್ದಾರೆ.

ಫರ್ಹಾನ್ ಯೂಸುಫ್ ನಾಯಕತ್ವದ ಬಳಗದಲ್ಲಿರುವ ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತದ ಎದುರು ಶತಕ ಬಾರಿಸಿದ್ದರು. ಈ ಟೂರ್ನಿಯ ಗುಂಪು ಹಂತದಲ್ಲಿ ಜಿಂಬಾಬ್ವೆ ಎದುರು ಅಜೇಯ 74 ಮತ್ತು ನ್ಯೂಜಿಲೆಂಡ್ ಎದುರು 76 ರನ್ ಗಳಿಸಿದ್ದರು. ಪಾಕ್ ಬ್ಯಾಟಿಂಗ್ ಅವರ ಮೇಲೆಯೇ ಹೆಚ್ಚು ಅವಲಂಬಿಸಿದೆ. 

ಬೌಲಿಂಗ್‌ನಲ್ಲಿ ಬಲಗೈ ವೇಗಿ ಅಲಿ ರಝಾ ನಾಲ್ಕು ಪಂದ್ಯಗಳಿಂದ 12 ವಿಕೆಟ್ ಗಳಿಸಿದ್ದಾರೆ. ಇನ್ನೊಬ್ಬ ವೇಗಿ ಅಬ್ದುಲ್ ಸುಭಾನ್ 10 ವಿಕೆಟ್ ಗಳಿಸಿದ್ದಾರೆ. ಅವರು ಭಾರತದ ಬ್ಯಾಟಿಂಗ್‌ಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ. 

ಪಂದ್ಯ ಆರಂಭ: ಮಧ್ಯಾಹ್ನ 1

ಆಯುಷ್ ಮ್ಹಾತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.